ಬೆಳ್ಳಂಬೆಳಗ್ಗೆ ಎಇಇ ಮನೆ ಮೇಲೆ ಲೋಕಾ ದಾಳಿ

0
5

ರಾಯಚೂರು: ಜಿಲ್ಲೆಯ ಸಿಂಧನೂರು ಉಪ ವಿಭಾಗದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಡಿ. ವಿಜಯಲಕ್ಷ್ಮಿ ಅವರ ಮನೆ ಸೇರಿದಂತೆ ಐದು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.

ನಗರದ ಐಡಿಎಸ್‌ಟಿ ಬಡಾವಣೆಯಲ್ಲಿರುವ ನಾಲ್ಕು ಮಹಡಿಯ ನಿವಾಸ ಹಾಗೂ ಅದಕ್ಕೆ ಹೊಂದಿಕೊಂಡಿರುವ ಇನ್ನೊಂದು ಮನೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮತ್ತು ಶೋಧ ಕಾರ್ಯ ನಡೆಸುತ್ತಿದ್ದಾರೆ. ಅಲ್ಲದೆ, ಸಿಂಧನೂರುದಲ್ಲಿರುವ ಕಚೇರಿ, ಯಾದಗಿರಿ ತಾಲೂಕಿನ ತೋಟದ ಮನೆ ಹಾಗೂ ಜೋಳದಡಗಿತ ಗ್ರಾಮದಲ್ಲಿರುವ ಅವರ ತಂಗಿಯ ಮನೆ ಮೇಲೆಯೂ ದಾಳಿ ನಡೆದಿದೆ.

ಇದನ್ನೂ ಓದಿ: ಗೃಹಲಕ್ಷ್ಮೀ ತಿಂಗಳ ಕಂತು ಈ ವಾರ ರಿಲೀಸ್

ಪ್ರಾಥಮಿಕ ಮಾಹಿತಿಯ ಪ್ರಕಾರ, ಯಾದಗಿರಿ ಜಿಲ್ಲೆಯಲ್ಲಿ ಸುಮಾರು 30 ಎಕರೆ ಜಮೀನು, ಯಾದಗಿರಿಯಲ್ಲಿ ವಿವಿಧ ಬಡಾವಣೆಗಳಲ್ಲಿ ನಿವೇಶನಗಳು, ಚಂದ್ರಬಂಡಾ ಸಮೀಪದ ಜಮೀನು ಸೇರಿದಂತೆ ಹಲವು ಅಚಲ ಆಸ್ತಿಗಳನ್ನು ಎಇಇ ಡಿ. ವಿಜಯಲಕ್ಷ್ಮಿ ಹೊಂದಿರುವ ಕುರಿತು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ಆಸ್ತಿಗಳು ಅವರ ತಿಳಿದ ಆದಾಯಕ್ಕೆ ಹೋಲಿಸಿದರೆ ಹೆಚ್ಚು ಎನ್ನುವ ಆರೋಪದ ಮೇಲೆ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

ಈ ದಾಳಿಯಲ್ಲಿ ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಲೋಕಾಯುಕ್ತ ಪೊಲೀಸರ ಐದು ತಂಡಗಳು ಭಾಗವಹಿಸಿದ್ದು, ವಿವಿಧ ಸ್ಥಳಗಳಲ್ಲಿ ದಾಖಲೆಗಳು, ಆಸ್ತಿ ವಿವರಗಳು ಮತ್ತು ಹಣಕಾಸು ವ್ಯವಹಾರಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಶೋಧ ಕಾರ್ಯ ಇನ್ನೂ ಮುಂದುವರಿದಿದ್ದು, ದಾಳಿ ಪೂರ್ಣಗೊಂಡ ಬಳಿಕ ಅಧಿಕೃತ ಮಾಹಿತಿಯನ್ನು ಲೋಕಾಯುಕ್ತ ಇಲಾಖೆ ಪ್ರಕಟಿಸುವ ನಿರೀಕ್ಷೆಯಿದೆ.

Previous article‘ದೇವರ ಜೊತೆ ಮಾತಾಡಿದ್ದಾರಲ್ಲ, ಕಾದು ನೋಡೋಣ’: ಡಿಕೆಶಿಗೆ ಕುಮಾರಸ್ವಾಮಿ ಟಾಂಗ್!