ಅಮರಾಪುರ ಕ್ರಾಸ್–ನವಿಲಗುಡ್ಡ ವ್ಯಾಪ್ತಿಯಲ್ಲಿ ಹೊಸ ಸರ್ಕಾರಿ ಪ್ರೌಢಶಾಲೆ

0
1

ದೇವದುರ್ಗ: ದೇವದುರ್ಗ ವಿಧಾನಸಭಾ ಕ್ಷೇತ್ರದ ಅಮರಾಪುರ ಕ್ರಾಸ್ ಮತ್ತು ನವಿಲಗುಡ್ಡ ಪ್ರದೇಶದಲ್ಲಿ ಬಹುಕಾಲದಿಂದಲೂ ಕೇಳಿಬರುತ್ತಿದ್ದ ಸರ್ಕಾರಿ ಪ್ರೌಢಶಾಲೆ ಅವಶ್ಯಕತೆ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಎರಡು ಸ್ಥಳಗಳ ಪೈಕಿ ಒಂದು ಗ್ರಾಮಕ್ಕೆ ಹೊಸ ಸರ್ಕಾರಿ ಪ್ರೌಢಶಾಲೆಯನ್ನು ಮಂಜೂರು ಮಾಡುವುದಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿಧಾನಸಭೆಯಲ್ಲಿ ಘೋಷಿಸಿದರು.

ಚಳಿಗಾಲದ ಅಧಿವೇಶನದ ವೇಳೆ ಶಾಸಕಿ ಕರೆಮ್ಮ ನಾಯಕ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡುತ್ತಿದ್ದ ಸಚಿವರು, ಅಮರಾಪುರ ಕ್ರಾಸ್ ಮತ್ತು ನವಿಲಗುಡ್ಡ ಶಾಲೆಗಳ 5 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಅಥವಾ ಅನುದಾನಿತ ಪ್ರೌಢಶಾಲೆಗಳು ಇಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಹೇಳಿದರು.

ಪ್ರೌಢಶಾಲೆ ಮಂಜೂರಾದರೆ ಲಾಭವಾಗುವ ಗ್ರಾಮಗಳು: ಹೊಸ ಶಾಲೆ ಮಂಜೂರಾದರೆ ಹಲವು ಗ್ರಾಮಗಳ ವಿದ್ಯಾರ್ಥಿಗಳಿಗೆ ದೀರ್ಘ ಪ್ರಯಾಣದ ಹೊರೆ ಕಡಿಮೆಯಾಗಲಿದೆ. ನವಿಲಗುಡ್ಡ. ಬಾಗೂರು. ನೀಲವಂಜಿ. ಕರಡಿಗುಡ್ಡ. ಮಂಡಲಗುಡ್ಡ. ಹೇರುಂಡಿ ಈ ಗ್ರಾಮಗಳ ವಿದ್ಯಾರ್ಥಿಗಳು ಈಗಾಗಲೇ ದೂರದ ಶಾಲೆಗಳತ್ತ ಹೋಗಬೇಕಾಗಿರುವ ತೊಂದರೆ ಬೇಗ ಪರಿಹಾರವಾಗಲಿದೆ.

ಮಲ್ಲೇಗೌಡರ ದೊಡ್ಡಿಗೆ ಸಹ ಸಕಾರಾತ್ಮಕ ಸೂಚನೆ: ಮಲ್ಲೇಗೌಡರ ದೊಡ್ಡಿ ಗ್ರಾಮದಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ ಶಾಲಾ ಕಟ್ಟಡ, ಶೌಚಾಲಯ ಮತ್ತು ಅಗತ್ಯ ಸೌಲಭ್ಯಗಳನ್ನು ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಶಿಕ್ಷಕರನ್ನು ನೇಮಿಸಿ ತಾತ್ಕಾಲಿಕ ಬ್ರಾಂಚ್ ಶಾಲೆ ಈಗಾಗಲೇ ಆರಂಭಿಸಲಾಗಿದೆ. ನಿಯಮಾನುಸಾರ ಶಾಲೆಯನ್ನು ಮಂಜೂರು ಮಾಡುವ ಕುರಿತು ಶೀಘ್ರ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು

ಶಿಕ್ಷಣದ ಲಭ್ಯತೆ ಹೆಚ್ಚಿಸುವ ಸರ್ಕಾರದ ಕ್ರಮ: ಗ್ರಾಮೀಣ ಪ್ರದೇಶಗಳಲ್ಲಿ ಪ್ರೌಢಶಿಕ್ಷಣದ ಲಭ್ಯತೆ ವಿಸ್ತರಿಸುವುದು ಮುಖ್ಯ ಗುರಿಯಾಗಿ ಸರ್ಕಾರ ಮುನ್ನಡೆಸುತ್ತಿರುವ ಸಂದರ್ಭದಲ್ಲಿ, ದೇವದುರ್ಗ ಕ್ಷೇತ್ರಕ್ಕೆ ಈ ನಿರ್ಧಾರ ಒಂದು ಮಹತ್ವದ ಹೆಜ್ಜೆಯಾಗಿದೆ. ಪ್ರತಿದಿನ ದೂರ ಪ್ರಯಾಣ ಮಾಡುತ್ತಿದ್ದ ಮಕ್ಕಳಿಗೆ ಇದು ಶಿಕ್ಷಣದ ಹೊಸ ದಾರಿ ತೆರೆಯಲಿದೆ.

Previous articleಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ನಿಧನ