ರಾಯಚೂರು: ಹತ್ತಿ ತುಂಬಿಕೊಂಡು ತೆರಳುತ್ತಿದ್ದ ಪಿಕ್‌ಅಪ್ ವಾಹನದ ಚಾಲಕನಿಗೆ ಮಧ್ಯರಸ್ತೆಯಲ್ಲೇ ಹೃದಯಾಘಾತ ಸಂಭವಿಸಿ, ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಮೃತಪಟ್ಟ ದಾರುಣ ಘಟನೆ ರಾಯಚೂರು ತಾಲೂಕಿನ ಗಾರಲದಿನ್ನಿ ಸಮೀಪ ನಡೆದಿದೆ.
ಮೃತನನ್ನು ನರಸಿಂಹ (33) ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ನರಸಿಂಹ ಹತ್ತಿ ತುಂಬಿಕೊಂಡು ರಾಯಚೂರು ಮಾರುಕಟ್ಟೆ ಕಡೆ ತೆರಳುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ವಾಹನ ನಿಯಂತ್ರಣ ತಪ್ಪಿ ಪಕ್ಕದ ಜಮೀನಿಗೆ ಬಿದ್ದಿದೆ.
ಅಪಘಾತದ ನಂತರ ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ ನರಸಿಂಹನನ್ನು ಆಸ್ಪತ್ರೆಗೆ ಸಾಗಿಸಿದರೂ, ಮಾರ್ಗಮಧ್ಯದಲ್ಲೇ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಗ್ರಾಮಸ್ಥರು ಈ ಘಟನೆಗೆ ದುಃಖ ವ್ಯಕ್ತಪಡಿಸಿ ಮೃತನ ಕುಟುಂಬಕ್ಕೆ ಶೋಕಸಾಂತ್ವನ ಸಲ್ಲಿಸಿದ್ದಾರೆ.


























