ಹುಬ್ಬಳ್ಳಿ: “ಶರಾವತಿ ನದಿಯ ಹಿನ್ನೀರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಂಬಾರಗೋಡ್ಲು – ಕಳಸವಳ್ಳಿ – ಸಿಗಂದೂರು ಸೇತುವೆಯ ಲೋಕಾರ್ಪಣೆಯನ್ನು ಶಿವಮೊಗ್ಗದ ಜನ ನಿಜಕ್ಕೂ ಹಬ್ಬದ ಸಂದರ್ಭ ಎಂದೇ ಭಾವಿಸುತ್ತಿದ್ದಾರೆ. ಆದರೆ ಇದರಲ್ಲೂ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ರಾಜಕೀಯ ಮಾಡುತ್ತಿರುವುದು ರಾಜ್ಯಕ್ಕೆ ಮಾಡುತ್ತಿರುವ ದ್ರೋಹ” ಎಂದು ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಕಾಂಗ್ರೆಸ್ ನಾಯಕರ ಗೈರು ಹಾಜರಿಯಲ್ಲಿಯೇ ಸೋಮವಾರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಸಿಗಂದೂರು ಸೇತುವೆ ಉದ್ಘಾಟಿಸಿದರು. ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಶಾಸಕ ಬಿ. ವೈ. ವಿಜಯೇಂದ್ರ, ಸಂಸದ ಬಿ. ವೈ. ರಾಘವೇಂದ್ರ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಸೇತುವೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಹ್ವಾನ ನೀಡಿರಲಿಲ್ಲವೇ? ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ‘ಆರೋಪಗಳೆಲ್ಲ ಸುಳ್ಳು ಹಾಗೂ ಕೆಟ್ಟ ರಾಜಕಾರಣದಿಂದ ಕೂಡಿದೆ” ಎಂದರು.
“ಸಿಗಂದೂರು ಸೇತುವೆಯ ಲೋಕಾರ್ಪಣೆ ಸಂದರ್ಭವನ್ನು ರಾಜಕೀಯ ದಾಳವಾಗಿ ಉರುಳಿಸಲು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂದಾಗಿರುವುದು ನಿಜಕ್ಕೂ ಬೇಸರದ ಸಂಗತಿ. ಈ ಮುಂಚೆಯೇ ಆಹ್ವಾನ ನೀಡಲಾಗಿದೆ” ಎಂದು ಹೇಳಿದ್ದಾರೆ.
“ಶಿವಮೊಗ್ಗ ಕ್ಷೇತ್ರದ ಲೋಕಸಭಾ ಸದಸ್ಯ ಬಿ. ವೈ. ರಾಘವೇಂದ್ರ ಜುಲೈ 9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನದ ಜೊತೆ ಪತ್ರವನ್ನು ಬರೆದಿದ್ದಾರೆ. ಸಿಗಂದೂರು ಸೇತುವೆ ಕರ್ನಾಟಕದ ಹೆಮ್ಮೆ, ಜನರಿಗೆ ಅನುಕೂಲ ಹಾಗೂ ಪ್ರವಾಸಿ ಕ್ಷೇತ್ರವಾಗುವ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜುಲೈ 11ರಂದು ಪತ್ರ ಬರೆದು ಆಹ್ವಾನಿಸಿದ್ದಾರೆ” ಎಂದು ಜೋಶಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬರೆದಿರುವ ಪತ್ರವನ್ನು ಸಹ ಜೋಶಿ ಹಂಚಿಕೊಂಡಿದ್ದಾರೆ.
“ರಾಜ್ಯದ ಅಭಿವೃದ್ಧಿಯನ್ನು ಮರೆತ ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ, ಇದೀಗ ಸಿಎಂ ಖುರ್ಚಿ ಜಗಳದಲ್ಲಿ ಮುಳುಗಿದೆ. ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಾಣವಾದ ಸೇತುವೆಯನ್ನು ಸಂಭ್ರಮಿಸುವ ಬದಲು ತನ್ನ ಕುರ್ಚಿ ಉಳಿಸಿಕೊಳ್ಳುವ ಬರದಲ್ಲಿ, ಶಿಷ್ಟಾಚಾರ ನಿಯಮ ಉಲ್ಲಂಘನೆ, ನನ್ನನ್ನು ಆಹ್ವಾನಿಸಿಯೇ ಇಲ್ಲ ಎಂಬ ಸುಳ್ಳು ಹಾಗೂ ಕೆಟ್ಟ ರಾಜಕಾರಣವನ್ನು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಮಾಡುತ್ತಿರುವುದು ರಾಜ್ಯಕ್ಕೆ ಮಾಡುತ್ತಿರುವ ದ್ರೋಹ” ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕರ್ನಾಟಕದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರ ಜೊತೆ ಈ ಹಿಂದೆಯೇ ಸಂಸದ ಬಿ. ವೈ. ರಾಘವೇಂದ್ರ ಹಾಗೂ ಅಧಿಕಾರಿಗಳು ಚರ್ಚಿಸಿ, ಉದ್ಘಾಟನೆಯ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೆ, ಉದ್ಘಾಟನೆಯ ಕುರಿತು ಮುಖ್ಯಮಂತ್ರಿಗಳಿಗೂ ಮಾಹಿತಿ ರವಾನೆಯಾಗಿದೆ. ಸಿಎಂ ಕುರ್ಚಿ ಗಲಾಟೆಯನ್ನು ಮರೆಮಾಚಲು ಈ ರೀತಿಯ ರಾಜಕಾರಣದ ದಾಳ ಉರುಳಿಸಿರುವುದು ರಾಜ್ಯದ ದುರಂತ” ಎಂದು ತಿಳಿಸಿದ್ದಾರೆ.
ಸೇತುವೆ ಉದ್ಘಾಟನೆ ವಿಚಾರ ಕಾಂಗ್ರೆಸ್, ಬಿಜೆಪಿ ನಡುವೆ ರಾಜಕೀಯಕ್ಕೆ ಕಾರಣವಾಗಿತ್ತು. ‘ಸಿಗಂದೂರು ಸೇತುವೆ ಉದ್ಘಾಟನಾ ಸಮಾರಂಭಕ್ಕೆ ನನ್ನನ್ನು ತಡವಾಗಿ ಆಮಂತ್ರಿಸಿದ್ದು, ಬೇರೆಡೆ ಕಾರ್ಯಕ್ರಮಗಳನ್ನು ನಾನು ಹಮ್ಮಿಕೊಂಡಿರುವುದರಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಿ, ಬೇರೊಂದು ದಿನ ಆಯೋಜಿಸಬೇಕು’ ಎಂದು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆ ಸಚಿವ ನಿತಿನ್ ಗಡ್ಕರಿಗೆ ಸಿದ್ದರಾಮಯ್ಯ ಭಾನುವಾರ ಪತ್ರವನ್ನು ಬರೆದಿದ್ದರು.