ಬೆಂಗಳೂರು: ನಮ್ಮ ಮೆಟ್ರೋ ರೈಲಿನ ಮೂಲಕ ಮೆಜೆಸ್ಟಿಕ್‌ಗೆ ಹೋಗುವ ಜನರು ಈಗ ಕೆಎಸ್ಆರ್‌ಟಿಸಿ ನಿಲ್ದಾಣಕ್ಕೆ ತಲುಪುವುದು ಸುಲಭವಾಗಿದೆ. ಪ್ರಯಾಣಿಕರ ಬೇಡಿಕೆಯಂತೆ ಬಿಎಂಆರ್‌ಸಿಎಲ್ ಪ್ರವೇಶ/ ನಿರ್ಗಮನ ದ್ವಾರವನ್ನು ತೆರೆದಿದೆ.
ಬಿಎಂಆರ್‌ಸಿಎಲ್ ಈ ಕುರಿತು ಮಾಹಿತಿಯನ್ನು ನೀಡಿದೆ. ಇದರಿಂದಗಿ ಕೆಎಸ್ಆರ್‌ಟಿಸಿ ಟರ್ಮಿನಲ್-2 ಮತ್ತು ಟರ್ಮಿನಲ್-2Aಗೆ ನೇರ ಪ್ರವೇಶವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದೆ.
ಪ್ರಯಾಣಿಕರು ಬಿಎಂಆರ್‌ಸಿಎಲ್ ಮುಂದೆ ನಿರಂತರವಾಗಿ ಈ ಕುರಿತು ಬೇಡಿಕೆಯನ್ನು ಸಲ್ಲಿಸುತ್ತಿದ್ದರು. ಆದ್ದರಿಂದ ಈ ಪ್ರವೇಶ/ ನಿರ್ಗಮನ ದ್ವಾರವನ್ನು ತೆರೆದು ನಮ್ಮ ಮೆಟ್ರೋ, ಬಸ್ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗಿದೆ.
ಈ ದ್ವಾರದಿಂದಾಗಿ ಮೆಜೆಸ್ಟಿಕ್ ಸುತ್ತಲೂ ಪಾದಾಚಾರಿಗಳ ದಟ್ಟಣೆ ಕಡಿಮೆಯಾಗಲಿದೆ. ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣದ ನಡುವೆ ಸಂಚಾರ ನಡೆಸುವ ಸಮಯ ಉಳಿತಾಯವಾಗಲಿದೆ.
ಸಾವಿರಾರು ಜನರ ಪ್ರಯಾಣ: ಮೆಜೆಸ್ಟಿಕ್‌ನಲ್ಲಿರುವ ನಾಡಪ್ರಭು ಕೆಂಪೇಗೌಡ ನಿಲ್ದಾಣ ನಮ್ಮ ಮೆಟ್ರೋದ ಪ್ರಮುಖ ಇಂಟರ್‌ಚೇಂಜ್ ನಿಲ್ದಾಣವಾಗಿದೆ. ಪ್ರಯಾಣಿಕರು ಹಸಿರು ಮತ್ತು ನೇರಳೆ ಮಾರ್ಗಕ್ಕಾಗಿ ಇಲ್ಲಿ ರೈಲು ಬದಲಾವಣೆ ಮಾಡಬೇಕಿದೆ. ಪ್ರತಿನಿತ್ಯ ಸಾವಿರಾರು ಜನರು ನಿಲ್ದಾಣಕ್ಕೆ ಭೇಟಿ ನೀಡುತ್ತಾರೆ.
ಅಲ್ಲದೇ ನಗರದ ವಿವಿಧ ಪ್ರದೇಶದಿಂದ ಮೆಟ್ರೋದಲ್ಲಿ ಮೆಜೆಸ್ಟಿಕ್‌ಗೆ ಆಗಮಿಸುವ ಪ್ರಯಾಣಿಕರು ಅಲ್ಲಿಂದ ಕೆಎಸ್ಆರ್ಟಿಸಿ ನಿಲ್ದಾಣಕ್ಕೆ ತಲುಪಿ ಅಲ್ಲಿಂದ ಮುಂದಕ್ಕೆ ಸಾಗುತ್ತಾರೆ. ಆದ್ದರಿಂದ ಮೆಟ್ರೋ ನಿಲ್ದಾಣದಿಂದ ಕೆಎಸ್ಆರ್‌ಟಿಸಿಗೆ ನೇರ ಪ್ರವೇಶ/ ನಿರ್ಗಮನ ಅಗತ್ಯವಿತ್ತು.
2024ರ ಸೆಪ್ಟೆಂಬರ್‌ನಲ್ಲಿ ಬಿಎಂಆರ್‌ಸಿಎಲ್ ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ಬದಲಾವಣೆ ಮಾಡಿಕೊಳ್ಳಲು ಮತ್ತೊಂದು ಪ್ರವೇಶ ದ್ವಾರವನ್ನು ತೆರೆದಿತ್ತು. ನಿಲ್ದಾಣದಲ್ಲಿನ ಜನದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿತ್ತು.
ಮೆಜೆಸ್ಟಿಕ್ ಹೊರತುಪಡಿಸಿ ನಮ್ಮ ಮೆಟ್ರೋ ನಗರದಲ್ಲಿ 16 ಇಂಟರ್ ಚೇಂಜ್ ನಿಲ್ದಾಣಗಳನ್ನು ಹೊಂದಲಿದೆ. ಮುಂಬರುವ ದಿನಗಳಲ್ಲಿ ಯೋಜನೆ ವಿಸ್ತಾರಗೊಂಡಂತೆ ಈ ನಿಲ್ದಾಣಗಳು ಕಾರ್ಯಾರಂಭ ಮಾಡಲಿವೆ.
ಮೆಜೆಸ್ಟಿಕ್‌ನಲ್ಲಿ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣ, ಬಿಎಂಟಿಸಿ ನಿಲ್ದಾಣ, ಕೆಎಸ್ಆರ್‌ಟಿಸಿ ನಿಲ್ದಾಣವಿದೆ. ಆದ್ದರಿಂದ ಪ್ರತಿನಿತ್ಯ ಲಕ್ಷಾಂತರ ಜನರು ಇಲ್ಲಿಗೆ ಆಗಮಿಸುತ್ತಾರೆ. ನಮ್ಮ ಮೆಟ್ರೋದಲ್ಲಿ ಸಂಚಾರ ನಡೆಸುವ ಹಲವಾರು ಜನರು ಬಿಎಂಟಿಸಿ, ಕೆಎಸ್ಆರ್‌ಟಿಸಿ ನಿಲ್ದಾಣಕ್ಕೆ ತೆರಳುತ್ತಾರೆ.
ಬೆಂಗಳೂರು ನಗರದಲ್ಲಿ ಪ್ರತಿದಿನ ಸುಮಾರು 8 ಲಕ್ಷ ಜನರು ನಮ್ಮ ಮೆಟ್ರೋ ಬಳಕೆ ಮಾಡುತ್ತಾರೆ. ಈ ವರ್ಷದ ಫೆಬ್ರವರಿಯಲ್ಲಿ ಪ್ರಯಾಣ ದರ ಏರಿಕೆ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆ 5.25 ಲಕ್ಷಕ್ಕೆ ಇಳಿಕೆಯಾಗಿತ್ತು. ಜುಲೈ ತಿಂಗಳಿನಲ್ಲಿ ಮತ್ತೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ.
ಸದ್ಯ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಮಾತ್ರ ನಗರದಲ್ಲಿ ಮೆಟ್ರೋ ಸಂಚಾರವನ್ನು ನಡೆಸುತ್ತಿದೆ. ಆಗಸ್ಟ್‌ನಲ್ಲಿ ಹಳದಿ ಮಾರ್ಗ ಉದ್ಘಾಟನೆಯಾಗಲಿದ್ದು, ಆ ರೈಲು ಮೆಜೆಸ್ಟಿಕ್‌ಗೆ ಬರುವುದಿಲ್ಲ. ಆದರೆ ಹಸಿರು ಮಾರ್ಗದಲ್ಲಿ ಆರ್.ವಿ.ರಸ್ತೆಯಲ್ಲಿ ಇಂಟರ್ ಚೇಂಜ್ ಪಡೆದು ಮೆಜೆಸ್ಟಿಕ್‌ಗೆ ಪ್ರಯಾಣಿಸಬಹುದು.
ಸಾಲು-ಸಾಲು ರಜೆ ಸಂದರ್ಭದಲ್ಲಿ ಮೆಜೆಸ್ಟಿಕ್‌ಗೆ ಮೆಟ್ರೋದಲ್ಲಿ ಸಾವಿರಾರು ಜನರು ಬರುತ್ತಾರೆ. ಅವರು ಅಲ್ಲಿಂದ ಕೆಎಸ್ಆರ್ಟಿಸಿ ನಿಲ್ದಾಣಕ್ಕೆ ಹೋಗುವಾಗ ಜನದಟ್ಟಣೆ ಉಂಟಾಗುತ್ತಿತ್ತು. ಇದನ್ನೆಲ್ಲ ಗಮನಿಸಿ ಹೊಸ ಪ್ರವೇಶ/ ನಿರ್ಗಮನ ದ್ವಾರ ತೆರೆಯಲಾಗಿದೆ.