ಮೈಸೂರು: ಹುಣಸೂರು ತಾಲೂಕಿನ ಗೌಡನಕಟ್ಟೆ ಗ್ರಾಮದಲ್ಲಿ ನವೆಂಬರ್ 29ರಂದು ತಾಯಿಯೊಂದಿಗೆ ಪತ್ತೆಯಾದ ನಾಲ್ಕು ಹುಲಿ ಮರಿಗಳೀಗ ಸಾವನ್ನಪ್ಪಿವೆ. ಆಹಾರ ಸೇವನೆ ನಿಲ್ಲಿಸಿದ ಪರಿಣಾಮ ಅಸ್ವಸ್ಥಗೊಂಡಿದ್ದ ಮರಿಗಳು ಕಳೆದ ನಾಲ್ಕು ದಿನಗಳ ಒಳಗೆ ಒಂದಾದ ಮೇಲೆ ಒಂದು ಪ್ರಾಣ ಕಳೆದುಕೊಂಡಿವೆ ಎಂದು ಅರಣ್ಯಾಧಿಕಾರಿಗಳು ದೃಢಪಡಿಸಿದ್ದಾರೆ.
ನವೆಂಬರ್ 29 ಮತ್ತು 30ರಂದು ಗೌಡನಕಟ್ಟೆಯ ಪ್ರಕಾಶ್ ಅವರ ಜೋಳದ ಹೊಲದ ಬಳಿ ಕಾಣಿಸಿಕೊಂಡ ನಾಲ್ಕು ಹುಲಿ ಮರಿಗಳು ಮತ್ತು ತಾಯಿ ಹುಲಿಯನ್ನು ಮಧ್ಯರಾತ್ರಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದು ಪುನರ್ವಸತಿ ಕೇಂದ್ರಕ್ಕೆ ರವಾನಿಸಿದ್ದಿದ್ದರು. ಆದರೆ ತಾಯಿಯಿಂದ ದೂರವಾದ ನಂತರ ಮರಿಗಳು ಆಹಾರ ಸೇವನೆ ಸಂಪೂರ್ಣ ನಿಲ್ಲಿಸಿ, ಜನರ ಸಂಚಲನ, ಕಿರುಚಾಟ ಮತ್ತು ವನ್ಯಜೀವಿ ಸೆರೆ ಕಾರ್ಯಾಚರಣೆಯ ಗಾಬರಿಯಿಂದ ನಿತ್ರಾಣಗೊಂಡಿದ್ದವು ಎನ್ನಲಾಗಿದೆ.
ಮರಿಗಳ ಬದುಕು ಉಳಿಯಲಿಲ್ಲ: ಹುಲಿ ಮರಿಗಳನ್ನು ಕೂಡಲೇ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದ್ದರೂ, ಅವು ಗಾಬರಿ ಮತ್ತು ದುರ್ಬಲತೆಯಿಂದ ಹೊರಬರಲಿಲ್ಲ. ನಾಲ್ಕೂ ಮರಿಗಳು ನಾಲ್ಕು ದಿನಗಳ ಅವಧಿಯಲ್ಲಿ ಸಾವಿಗೀಡಾಗಿವೆ ಎಂದು ಮೂಲಗಳು ತಿಳಿಸಿವೆ.
ಮರಣೋತ್ತರ ಪರೀಕ್ಷೆ ನಡೆಯುತ್ತಿದೆ: ಮರಿಗಳ ಸಾವಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪಶುವೈದ್ಯರಿಂದ ಮರಣೋತ್ತರ ಪರೀಕ್ಷೆ (PM) ನಡೆಸಲಾಗುತ್ತಿದ್ದು ವರದಿ ನಿರೀಕ್ಷೆಯಲ್ಲಿದೆ. ಅದೇ ವೇಳೆ ತಾಯಿ ಹುಲಿ ಮಾತ್ರ ಆರೋಗ್ಯವಾಗಿರುವುದಾಗಿ ಮತ್ತು ಸಮರ್ಪಕ ನಿರೀಕ್ಷಣೆಯಲ್ಲಿರುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಮಾನವ–ವನ್ಯಜೀವಿ ಘರ್ಷಣೆಗೆ ಮತ್ತೊಂದು ಉದಾಹರಣೆ: ಗೌಡನಕಟ್ಟೆ ಪ್ರದೇಶದಲ್ಲಿ ಕಳೆದ ಕೆಲ ತಿಂಗಳಲ್ಲಿ ಹುಲಿ ಸಂಚಲನ ಹೆಚ್ಚಿದ್ದು, ಮನುಷ್ಯರ ಹಳ್ಳಿಗಳತ್ತ ಬೇಟೆಗಾರ ಹುಲಿಗಳು ಬರುತ್ತಿರುವುದು ಆತಂಕ ಹೆಚ್ಚಿಸಿದೆ. ಈ ಘಟನೆಯು ಸೆರೆ ಕಾರ್ಯಾಚರಣೆಯಲ್ಲಿ ಮರಿಗಳ ತಾಯಿಯಿಂದ ಪ್ರತ್ಯೇಕತೆ ಮತ್ತು ಮಾನವ ಸಂಚಲನದ ಒತ್ತಡ ವನ್ಯಜೀವಿಗಳ ಬದುಕಿನಲ್ಲಿ ಎಷ್ಟು ಗಂಭೀರ ಪರಿಣಾಮ ಬೀರುತ್ತದೆ ಎಂಬುದನ್ನು ಮತ್ತೊಮ್ಮೆ ನೆನಪಿಸಿದೆ.























