ಮೈಸೂರು: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆ, ಗೃಹ ಸಚಿವ ಜಿ. ಪರಮೇಶ್ವರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಸ್ಪಷ್ಟನೆ ನೀಡಿದ್ದು, ಮುಂದಿನ ಎರಡು ವರ್ಷಗಳ ಕಾಲವೂ ಸಿದ್ದರಾಮಯ್ಯನೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಸ್ತುತ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. 2023ರಲ್ಲಿ ಹೈಕಮಾಂಡ್ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಿದೆ. ಆ ಅವಧಿ 2028ರವರೆಗೆ ಮುಂದುವರಿಯಬೇಕು. ಹೈಕಮಾಂಡ್ ಪ್ರತ್ಯೇಕವಾಗಿ ಐದು ವರ್ಷ ಸಿಎಂ ಎಂದು ಹೇಳಬೇಕಾದ ಅಗತ್ಯವಿಲ್ಲ” ಎಂದು ಹೇಳಿದರು.
2013ರ ಉದಾಹರಣೆಯನ್ನು ಉಲ್ಲೇಖಿಸಿದ ಅವರು, “ಆಗಲೂ ಹೈಕಮಾಂಡ್ ಐದು ವರ್ಷಗಳ ಅವಧಿ ಘೋಷಿಸಿರಲಿಲ್ಲ. ಆದರೂ ಸಿದ್ದರಾಮಯ್ಯ ಅವರು ಸಂಪೂರ್ಣ ಅವಧಿಯನ್ನು ಪೂರೈಸಿದರು. ಈ ಬಾರಿಯೂ ಅದೇ ರೀತಿಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ” ಎಂದರು.
ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಬಗ್ಗೆ ನಡೆಯುತ್ತಿರುವ ಊಹಾಪೋಹಗಳನ್ನು ತಳ್ಳಿಹಾಕಿದ ಪರಮೇಶ್ವರ್, “ಹೈಕಮಾಂಡ್ ಈ ಬಗ್ಗೆ ಯಾವುದೇ ಗೊಂದಲ ಸೃಷ್ಟಿಸಿಲ್ಲ. ಯಾರು ಏನೇ ಮಾತನಾಡಿದರೂ ಅದು ವೈಯಕ್ತಿಕ ಅಭಿಪ್ರಾಯ ಮಾತ್ರ. ಹೈಕಮಾಂಡ್ ನಿರ್ಧಾರವೇ ಅಂತಿಮ” ಎಂದು ಸ್ಪಷ್ಟಪಡಿಸಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುರಿತು ಮಾತನಾಡಿದ ಅವರು, “ಅವರು ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಆಗಿದ್ದಾರೆ. ಅವರು ನಮ್ಮ ನಾಯಕರು. ಅವರಿಗೂ ಯಾವುದೇ ಸಮಸ್ಯೆ ಇಲ್ಲ” ಎಂದು ಹೇಳಿದರು.
ಇನ್ನು ಉಪಚುನಾವಣೆಯ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, “ಉಪಚುನಾವಣೆ ಫಲಿತಾಂಶ ರಾಜ್ಯ ರಾಜಕೀಯದ ದಿಕ್ಸೂಚಿ ಅಲ್ಲ. ಇದು ಸರ್ಕಾರದ ಕಾರ್ಯಕ್ಷಮತೆಗೆ ನೀಡುವ ಅಂಕಗಳೂ ಅಲ್ಲ. ಎರಡು ಕ್ಷೇತ್ರಗಳಲ್ಲೂ ನಾವು ಗೆಲುವು ಸಾಧಿಸುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳು ಮತ್ತು ಆಡಳಿತ ದಕ್ಷತೆಯ ಆಧಾರದಲ್ಲಿ ಜನ ಕಾಂಗ್ರೆಸ್ ಪರ ಮತ ಹಾಕಲಿದ್ದಾರೆ ಎಂದು ಅವರು ಹೇಳಿದ್ದಾರೆ. ಬಿಜೆಪಿ ಮಾಡುತ್ತಿರುವ ಆರೋಪಗಳನ್ನು ತಳ್ಳಿ ಹಾಕಿದ ಅವರು, ಜನ ನಮ್ಮ ಪರವಾಗಿದ್ದಾರೆ ಎಂದರು.
ಇದೇ ವೇಳೆ, ಚುನಾವಣಾ ಪ್ರಚಾರದ ವೇಳೆ ಅವಹೇಳನಕಾರಿ ಭಾಷಣಗಳ ಬಗ್ಗೆ ಮಾತನಾಡಿದ ಅವರು, “ರಾಜಕೀಯದಲ್ಲಿ ಸಂಸ್ಕಾರ ಅತ್ಯಂತ ಮುಖ್ಯ. ವೈಯಕ್ತಿಕ ನಿಂದನೆ, ಕೆಟ್ಟ ಪದ ಬಳಕೆ ಮಾಡಬಾರದು. ಸಮಾಜ ಇದನ್ನೆಲ್ಲ ಗಮನಿಸುತ್ತಿದೆ” ಎಂದು ಎಚ್ಚರಿಕೆ ನೀಡಿದರು.






















