2028ರವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ

0
1

ಮೈಸೂರು: ಆರಂಭದಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡುತ್ತಲೇ ಇರುವ ಸಚಿವ ಜಮೀರ್ ಅಹಮದ್ ಖಾನ್ 2028ರವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಎಂದು ಹೇಳುವ ಮೂಲಕ ಡಿ.ಕೆ. ಶಿವಕುಮಾರ್ ಬೆಂಬಲಿಗರಿಗೆ ತಿರುಗೇಟು ನೀಡಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರೇ 2028ರವರೆಗೂ ಮುಖ್ಯಮಂತ್ರಿಯಾಗಿ ಇರುತ್ತಾರೆ. ಹೈಕಮಾಂಡ್ ಬಿಟ್ಟು ಬೇರೆ ಯಾರಿಂದಲೂ ಅವರನ್ನು ಕೆಳಗಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಕುರ್ಚಿ ಭದ್ರವಾಗಿದೆ ಎಂದಿದ್ದಾರೆ.

ಸಿದ್ದರಾಮಯ್ಯ ಅವರು ಕುರ್ಚಿಯಲ್ಲಿ ಕುಳಿತಿದ್ದಾರೆ. ಅವರ ಕುರ್ಚಿಯಲ್ಲಿ ಭದ್ರವಾಗಿದ್ದಾರೆ. ಏನೇ ತೀರ್ಮಾನ ಮಾಡಿದರೂ ಹೈಕಮಾಂಡ್ ಮಾಡಲಿದೆ ಎಂದು ಸ್ವತಃ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ಮತ್ತೆ ಮತ್ತೆ ಆ ಮಾತು ಏಕೆ. ಇನ್ನು ಅಧಿಕಾರ ಹಂಚಿಕೆ ವಿಷಯ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

ರಾಮನಗರದ ಶಾಸಕ ಇಕ್ಬಾಲ್ ಹುಸೇನ್ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲರೂ ಅವರವರ ಅಭಿಪ್ರಾಯ ಹೇಳುತ್ತಾರೆ. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಸಿದ್ದರಾಮಯ್ಯ ಈಗ ಸಿಎಂ ಖುರ್ಚಿ ಮೇಲೆ ಕೂತಿದ್ದಾರೆ. 2028ರವರೆಗೂ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ಉತ್ತರಿಸಿದರು.

ಅಂತಿಮವಾಗಿ ನಮ್ಮದು ಹೈಕಮಾಂಡ್ ಪಕ್ಷ. ಸಿಎಂ ಬದಲಾವಣೆ ಮಾಡಬೇಕಿರುವುದು ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ಸದ್ಯ ಸಿಎಂ ಬದಲಾವಣೆಯ ಸನ್ನಿವೇಶಗಳು ಇಲ್ಲ ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್ ಅವರ ದೆಹಲಿ ಪ್ರವಾಸ ಕುರಿತು ಕೇಳಿದ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಅವರು ತಮ್ಮ ಇಲಾಖೆ ವಿಚಾರಕ್ಕೆ ದೆಹಲಿಗೆ ಹೋಗಿದ್ದಾರೆ. ಹೈಕಮಾಂಡ್‌ನ್ನು ಅವರು ಭೇಟಿ ಆಗಿಲ್ಲ ಎಂದರು. ಆಪ್ತ ಸಹಾಯಕ ಸರ್ಫರಾಜ್ ಮನೆ ಮೇಲೆ ಲೋಕಾ ದಾಳಿ ನಡೆಸಿರುವ ಬಗ್ಗೆ, ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಸರ್ಫರಾಜ್ ಅವರ ತಂದೆ ಕಾಲದಿಂದಲೂ ಶ್ರೀಮಂತರು. ಯಾಕೆ ದಾಳಿ ಆಗಿದೆ ಎಂಬುದು ಗೊತ್ತಿಲ್ಲ ನೋಡೋಣ ಏನಾಗುತ್ತೆ ಅನ್ನೋದನ್ನ ಎಂದರು.

Previous articleಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ಸ್: ವಿಜಯಲಕ್ಷ್ಮಿ ದರ್ಶನ್‌ ದೂರು