ದ್ವೇಷ ಭಾಷಣ ಮಸೂದೆ ವಿರುದ್ಧ ಬಿಜೆಪಿ ಆರೋಪ ಹಾಸ್ಯಾಸ್ಪದ

0
2

ಪ್ರಚೋದನಕಾರಿ ಭಾಷಣ ಮಾಡುವವರು ಮಾತ್ರ ಭಯಪಡಬೇಕು – ಮೈಸೂರಿನಲ್ಲಿ ಸ್ಪಷ್ಟನೆ

ಮೈಸೂರು: ರಾಜ್ಯ ಸರ್ಕಾರ ಜಾರಿಗೆ ತರುವ ಉದ್ದೇಶ ಹೊಂದಿರುವ ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿದೆ ಎಂಬ ಬಿಜೆಪಿಯ ಆರೋಪ ಸಂಪೂರ್ಣವಾಗಿ ಹಾಸ್ಯಾಸ್ಪದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬಿಜೆಪಿ ಮಾತ್ರ ಏಕೆ ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, “ಪ್ರಚೋದನಕಾರಿ ಭಾಷಣ ಮಾಡುವವರೇ ಈ ಮಸೂದೆಗೆ ಭಯಪಡಬೇಕು. ದ್ವೇಷ ಭಾಷಣ ಮಾಡದೇ ಇದ್ದರೆ ಯಾರ ಮೇಲೂ ಸುಮ್ಮನೆ ಪ್ರಕರಣ ದಾಖಲಿಸುವ ಪ್ರಶ್ನೆಯೇ ಇಲ್ಲ. ಬಿಜೆಪಿಯವರು ‘ಕುಂಭಳಕಾಯಿ ಕಳ್ಳ’ ಎಂದರೆ ಹೆಗಲು ಮುಟ್ಟಿ ಏಕೆ ನೋಡಿಕೊಳ್ಳುತ್ತಿದ್ದಾರೆ?” ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಎಚ್ಚರ! ಒಟಿಪಿ ಕೇಳದೇ ಮೊಬೈಲ್ ಹ್ಯಾಕ್ ಮಾಡ್ತಾರೆ!

ಸಮಾಜದಲ್ಲಿ ಶಾಂತಿ ಮತ್ತು ಭ್ರಾತೃತ್ವಕ್ಕೆ ದ್ವೇಷ ಭಾಷಣ ಅತಿದೊಡ್ಡ ಅಪಾಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳು ಹೆಚ್ಚಾಗುತ್ತಿರುವುದರಿಂದ ಅವನ್ನು ನಿಯಂತ್ರಿಸಲು ಈ ಮಸೂದೆ ರೂಪಿಸಲಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

“ದ್ವೇಷ ಭಾಷಣದಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆಯೇ? ಶಾಂತಿ, ಸೌಹಾರ್ದತೆ ಹಾಗೂ ಭ್ರಾತೃತ್ವ ಕಾಪಾಡುವುದು ಸರ್ಕಾರದ ಕರ್ತವ್ಯ. ಅದಕ್ಕಾಗಿಯೇ ಈ ಮಸೂದೆ ಜಾರಿಗೆ ತರಲಾಗುತ್ತಿದೆ. ಬಿಜೆಪಿಯವರು ಇದನ್ನು ವಿರೋಧಿಸುತ್ತಿರುವುದೇ ಅವರು ದ್ವೇಷ ಭಾಷಣ ಮಾಡುವುದರಿಂದ ಇರಬಹುದು” ಎಂದು ತೀವ್ರ ಟೀಕೆ ಮಾಡಿದರು.

ಗೃಹಲಕ್ಷ್ಮಿ ಹಣ ಶೀಘ್ರ ಬಿಡುಗಡೆಗೆ ಭರವಸೆ

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿದ ಮುಖ್ಯಮಂತ್ರಿ, “ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಇನ್ನೂ ಬಿಡುಗಡೆಯಾಗಿಲ್ಲ. ಈ ಬಗ್ಗೆ ಪರಿಶೀಲಿಸಿ ಶೀಘ್ರವಾಗಿ ಹಣ ಬಿಡುಗಡೆ ಮಾಡಲಾಗುವುದು” ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಗೃಹಲಕ್ಷ್ಮೀ ತಿಂಗಳ ಕಂತು ಈ ವಾರ ರಿಲೀಸ್

“ಸರ್ಕಾರದ ಬಳಿ ಹಣವಿಲ್ಲದಿದ್ದರೆ 23 ತಿಂಗಳ ಗೃಹಲಕ್ಷ್ಮಿ ಹಣ ನೀಡಲು ಸಾಧ್ಯವಾಗುತ್ತಿತ್ತೇ? ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗುತ್ತಿರುವಾಗ ಲಪಟಾಯಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಣವನ್ನು ಯಾರು ತೆಗೆದುಕೊಳ್ಳಲಿಲ್ಲ, ಹಣ ಇನ್ನೂ ಬಿಡುಗಡೆ ಆಗಿಲ್ಲ ಅಷ್ಟೇ” ಎಂದು ಸ್ಪಷ್ಟನೆ ನೀಡಿದರು.

ಪಕ್ಷಕ್ಕಿಂತ ಯಾರು ದೊಡ್ಡವರಲ್ಲ – ಖರ್ಗೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಸಮ್ಮತಿ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ “ಪಕ್ಷಕ್ಕಿಂತ ಯಾರು ದೊಡ್ಡವರಲ್ಲ” ಎಂಬ ಹೇಳಿಕೆಗೆ ತಮ್ಮ ಪೂರ್ಣ ಸಹಮತವಿದೆ ಎಂದು ಸಿದ್ದರಾಮಯ್ಯ ಹೇಳಿದರು.

“ಯಾರು ಪಕ್ಷಕ್ಕಿಂತ ದೊಡ್ಡವರಾಗಲು ಸಾಧ್ಯವೇ ಇಲ್ಲ. ನಾಯಕತ್ವ ಬದಲಾವಣೆ ಕುರಿತು ತೀರ್ಮಾನ ಮಾಡುವ ಅಧಿಕಾರ ರಾಹುಲ್ ಗಾಂಧಿಯವರಿಗೇ ಇದೆ. ಅವರು ಏನು ತೀರ್ಮಾನಿಸುತ್ತಾರೋ ಅದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ” ಎಂದರು.

ಈ ವಿಚಾರವಾಗಿ ಪಕ್ಷದ ವರಿಷ್ಠರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ ಅವರು, ನಾವು ಈ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಅವರ ತೀರ್ಮಾನಕ್ಕೆ ಸಂಪೂರ್ಣ ಬೆಂಬಲವಿದೆ” ಎಂದು ಹೇಳಿದರು.

ಇದನ್ನೂ ಓದಿ: ರೈತರು ಬೆಳೆದ ಬೆಳೆಗಳಿಂದ ಸಚಿವ ಎಂ.ಬಿ. ಪಾಟೀಲರಿಗೆ ತುಲಾಭಾರ

ನಾಯಕತ್ವ ಬದಲಾವಣೆ ವಿಚಾರಕ್ಕೆ ತಡೆ: ಮಾಧ್ಯಮದವರು ನಾಯಕತ್ವ ಬದಲಾವಣೆ ಬಗ್ಗೆ ಅನಾವಶ್ಯಕವಾಗಿ ಹೆಚ್ಚು ಚರ್ಚೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಿಎಂ, “ವಿಧಾನಸಭೆಯಲ್ಲೇ ಈ ಬಗ್ಗೆ ಹೇಳಿದ್ದೇನೆ. ಮತ್ತೆ ಮತ್ತೆ ಈ ವಿಚಾರವನ್ನು ಎತ್ತುವುದು ಅನಾವಶ್ಯಕ” ಎಂದು ಹೇಳಿದರು.

ಅಪೆಕ್ಸ್ ಬ್ಯಾಂಕ್ ವಿಚಾರದಲ್ಲಿ ಸ್ಪಷ್ಟನೆ: ಕೆ.ಎನ್. ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಎಸ್.ಎಂ. ಕೃಷ್ಣ ಅವರ ಸರ್ಕಾರ. ನಾನು ಮಾಡಿದೆ, ಅವರು ಮಾಡಿದರು ಎನ್ನುವುದು ಮುಖ್ಯವಲ್ಲ. ಆಗ ಮುಖ್ಯಮಂತ್ರಿಯಾಗಿದ್ದವರು ಎಸ್.ಎಂ. ಕೃಷ್ಣ, ಅವರ ಸರ್ಕಾರವೇ ಆ ತೀರ್ಮಾನ ಕೈಗೊಂಡಿತ್ತು” ಎಂದು ಸ್ಪಷ್ಟಪಡಿಸಿದರು.

Previous articleಡಿಕೆಶಿಗೆ ಸಿಎಂ ಮಾಡಲು ಹಿಂದುಳಿದ ಮಠಾಧೀಶರ ಬ್ಯಾಟಿಂಗ್