ಮೈಸೂರು: ರಾಜ್ಯ ರಾಜಕಾರಣದಲ್ಲಿ ಮತ್ತೆ ಮುನ್ನೆಲೆಗೆ ಬಂದಿರುವ “ಬಜೆಟ್ ನಂತರ ಅಧಿಕಾರ ಹಂಚಿಕೆ” ಕುರಿತ ಚರ್ಚೆಗಳಿಗೆ ಸಂಬಂಧಿಸಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಬಜೆಟ್ ನಂತರ ಅಧಿಕಾರ ಹಂಚಿಕೆ ನಡೆಯಲಿದೆ ಎಂಬ ಮಾತನ್ನು ನಾನು ಎಲ್ಲಿಯೂ ಹೇಳಿಲ್ಲ ಎಂದು ಅವರು ಖಡಕ್ ಆಗಿ ತಿರಸ್ಕರಿಸಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷಗಳ ಪೂರ್ಣ ಅವಧಿಗೆ ಸಿಎಂ ಆಗಿ ಆಯ್ಕೆಯಾಗಿರುವುದು ಸ್ಪಷ್ಟವಾಗಿದ್ದು, ಈ ವಿಚಾರವನ್ನು ನಾವು ಹಾಗೂ ಮುಖ್ಯಮಂತ್ರಿಗಳೇ ಹಲವು ಬಾರಿ ಹೇಳಿದ್ದಾರೆ ಎಂದು ತಿಳಿಸಿದರು. ಈ ವಿಷಯದ ಬಗ್ಗೆ ಮತ್ತೆ ಮತ್ತೆ ಪ್ರಶ್ನೆಗಳನ್ನು ಕೇಳುವುದು ಬೇಡ. ಇಂತಹ ಚರ್ಚೆಗಳು ಇಲ್ಲಿಗೆ ಕೊನೆಗಾಣಬೇಕು ಎಂದು ಅವರು ಹೇಳಿದರು.
ಇದನ್ನೂ ಓದಿ: ಹಿರಿಯ ಯಕ್ಷಗಾನ ಭಾಗವತರು ಕಡತೋಕಾ ಲಕ್ಷ್ಮೀನಾರಾಯಣ ನಿಧನ
“ಬಜೆಟ್ ನಂತರ ಅಧಿಕಾರ ಹಂಚಿಕೆ ನಡೆಯುತ್ತದೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಆ ರೀತಿಯ ಮಾತನ್ನೇ ನಾನು ಆಡಿಲ್ಲ. ಅಧಿಕಾರ ಹಂಚಿಕೆ ಕುರಿತು ನಿರ್ಧಾರ ಮಾಡುವ ಸ್ಥಾನದಲ್ಲೂ ನಾನು ಇಲ್ಲ. ನಾನು ಯಾವ ಸಿಎಂ ರೇಸ್‌ನಲ್ಲೂ ಇಲ್ಲ” ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಇನ್ನೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ನೀವು ರೇಸ್‌ನಲ್ಲಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಆ ವಿಷಯ ಚರ್ಚೆಯ ಹಂತದಲ್ಲೇ ಇಲ್ಲ. ಆ ವಿಷಯ ಬಂದಾಗ ನೋಡೋಣ ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಬಳ್ಳಾರಿ ಗಲಭೆ ಪ್ರಕರಣ: FSL ತಂಡಕ್ಕೆ ಮತ್ತೊಂದು ಬುಲೆಟ್ ಪತ್ತೆ
ಇನ್ನು ಬಳ್ಳಾರಿಯಲ್ಲಿ ನಡೆದ ಗಲಾಟೆ ಹಾಗೂ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕರು ನ್ಯಾಯಾಧೀಶರ ತನಿಖೆಗೆ ಒತ್ತಾಯಿಸುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, “ಇನ್ನೂ ತನಿಖಾ ವರದಿ ಬಂದಿಲ್ಲ. ವರದಿ ಬಂದ ನಂತರ ನೋಡೋಣ. ಸರಿಯಾದ ರೀತಿಯಲ್ಲಿ ತನಿಖೆ ನಡೆಯುತ್ತಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಇದ್ದಾರೆ. ಈ ವಿಚಾರದಲ್ಲಿ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ” ಎಂದು ಹೇಳಿದರು.
ರಾಜ್ಯ ರಾಜಕಾರಣದಲ್ಲಿ ಸಿಎಂ ಸ್ಥಾನ, ಅಧಿಕಾರ ಹಂಚಿಕೆ ಹಾಗೂ ಕೆಪಿಸಿಸಿ ನೇಮಕಾತಿಗಳ ಕುರಿತು ನಡೆಯುತ್ತಿರುವ ಊಹಾಪೋಹಗಳಿಗೆ ತೆರೆ ಎಳೆಯುವ ಉದ್ದೇಶದಿಂದ ಸಚಿವ ಸತೀಶ್ ಜಾರಕಿಹೊಳಿ ನೀಡಿರುವ ಈ ಸ್ಪಷ್ಟನೆ ಮಹತ್ವ ಪಡೆದುಕೊಂಡಿದೆ.






















