ವಿಜಯಪುರ ಮೂಲದ ಕಾಂತರಾಜ್ ಚೌಹಾಣ್:ಮೈಸೂರು ಲಾಡ್ಜ್ ಸಮೀಪ ಮೃತದೇಹ ಪತ್ತೆ
ಮೈಸೂರು: ವಿಜಯಪುರ ಮೂಲದ ಕಾಂತರಾಜ್ ಚೌಹಾಣ್ (35) ಅವರು ಮೈಸೂರು ಜಿಲ್ಲೆಯ ಟಿ.ನರಸೀಪುರ ಸಾಮಾಜಿಕ ಅರಣ್ಯ ವಲಯದ ರೇಂಜ್ ಫಾರೆಸ್ಟ್ ಅಧಿಕಾರಿ (ಆರ್ಎಫ್ಒ) ಆಗಿ ಕಾರ್ಯನಿರ್ವಹಿಸುತ್ತಿದ್ದು, ಇಂದು ಬೆಳಿಗ್ಗೆ ಮೈಸೂರಿನ ಸಬ್ ಅರ್ಬನ್ ಬಸ್ ನಿಲ್ದಾಣದ ಸಮೀಪದ ಮದರ್ ತೆರೆಸಾ ರಸ್ತೆ (ಬಿ.ಎನ್.ರೋಡ್)ಯಲ್ಲಿನ ಖಾಸಗಿ ಲಾಡ್ಜ್ ಹತ್ತಿರದ ಕ್ರಾಸ್ ರಸ್ತೆಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಘಟನೆ ಮೈಸೂರು ನಗರದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಕಾಂತರಾಜ್ ಅವರ ಸ್ನೇಹಿತ ಮನು ನೀಡಿದ ಮಾಹಿತಿಯಂತೆ, ನಿನ್ನೆ ಸಂಜೆ ಖಾಸಗಿ ಲಾಡ್ಜ್ನಲ್ಲಿ ಪಾರ್ಟಿಗೆ ಕಾಂತರಾಜ್ ಆಹ್ವಾನಿಸಿದ್ದರು. ಪಾರ್ಟಿ ಮುಗಿದ ಬಳಿಕ ಇಬ್ಬರೂ ರಾತ್ರಿ ವಾಕಿಂಗ್ಗೆ ತೆರಳಿದ್ದು, ನಂತರ ಲಾಡ್ಜ್ ಕೊಠಡಿಗೆ ಮರಳಿ ನಿದ್ರೆಗೆ ಹೋಗಿದ್ದರು ಎನ್ನಲಾಗಿದೆ. ಆದರೆ ಇಂದು ಬೆಳಿಗ್ಗೆ ಮನು ಎದ್ದಾಗ ಕಾಂತರಾಜ್ ಕೊಠಡಿಯಲ್ಲಿ ಕಾಣಿಸದೇ ಇದ್ದುದರಿಂದ ಲಾಡ್ಜ್ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಲಾಡ್ಜ್ ಸಮೀಪದ ಕ್ರಾಸ್ ರಸ್ತೆಯಲ್ಲಿ ಕಾಂತರಾಜ್ ಅವರ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ: ಪೋಕ್ಸೋ ಸಂತ್ರಸ್ತೆಯ ಗುರುತು ಬಹಿರಂಗ: ಶ್ರೀರಾಮುಲು ವಿರುದ್ಧ FIR
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಲಕ್ಷರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಲೋಲಾಕ್ಷಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ಬಳಿಕ ಮೃತದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಎಂಎಂಸಿ & ಆರ್ಐ)ಯ ಮರಣೋತ್ತರ ಪರೀಕ್ಷಾ ಗೃಹಕ್ಕೆ ರವಾನಿಸಲಾಗಿದೆ. ದೇವರಾಜ ಠಾಣೆ ಸಹಾಯಕ ಪೊಲೀಸ್ ಆಯುಕ್ತ ಕೆ. ರಾಜೇಂದ್ರ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾಂತರಾಜ್ ಅವರ ಸಾವಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಇದು ಆಕಸ್ಮಿಕ ಸಾವು, ಹೃದಯಾಘಾತವೇ ಅಥವಾ ಬೇರೆ ಕಾರಣಗಳಿವೆಯೇ ಎಂಬ ಕುರಿತು ತನಿಖೆ ನಡೆಯುತ್ತಿದೆ. ಲಾಡ್ಜ್ ಸಿಬ್ಬಂದಿ, ಸ್ನೇಹಿತರ ಹೇಳಿಕೆಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: AI ಲೋಕದಲ್ಲಿ ‘ದೇವರ’ ದರ್ಶನ : ಕ್ರೇಜಿ ಸ್ಟಾರ್ ಒನ್ ಮ್ಯಾನ್ ಶೋ
ಈ ಸಂಬಂಧ ಲಕ್ಷರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.









