ದಾಖಲೆಗಳು ಮುರಿಯಲೆಂದೇ ನಿರ್ಮಾಣವಾಗುತ್ತವೆ: ಸಿದ್ದರಾಮಯ್ಯ

0
24

ಮೈಸೂರು: ಮಾಜಿ ಸಿಎಂ ದಿವಂಗತ ದೇವರಾಜ್ ಅರಸ್ ಅವರ ಮುಖ್ಯಮಂತ್ರಿಯ ಸುದೀರ್ಘ ಅವಧಿಯ ದಾಖಲೆ ಮುರಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ಆಶೀರ್ವಾದದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.

ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ದಿವಂಗತ ದೇವರಾಜ್ ಅರಸ್ ಅವರ ಮುಖ್ಯಮಂತ್ರಿಯ ಸುದೀರ್ಘ ಅವಧಿಯ ದಾಖಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಮುರಿಯಲಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಜನರ ಆಶೀರ್ವಾದದಿಂದ ಇದು ಸಾಧ್ಯವಾಗಿದೆ. ಅರಸುರವರು ಮೈಸೂರಿನವರೇ ಆಗಿರುವುದು ಸಂತೋಷದ ಸಂಗತಿ. ತಾಲೂಕು ಬೋರ್ಡ್ ಸದಸ್ಯನಾದ ನಂತರದ ನನ್ನ ರಾಜಕೀಯ ಜೀವನದಲ್ಲಿ ಸಚಿವನಾಗುವ ಮತ್ತು ಮುಖ್ಯಮಂತ್ರಿಯಾಗುವ ನಿರೀಕ್ಷೆಯಿರಲಿಲ್ಲ. 13 ಚುನಾವಣೆಗಳನ್ನೂ ಎದುರಿಸಿ 8ಕ್ಕೂ ಹೆಚ್ಚು ಬಾರಿ ಗೆಲುವು ಸಾಧಿಸಿದ್ದೇನೆ ಎಂದರು.

ಇದನ್ನೂ ಓದಿ:  ಬಜೆಟ್ ನಂತರ ಅಧಿಕಾರ ಹಂಚಿಕೆ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ

ದಾಖಲೆಗಳು ಮುರಿಯಲೆಂದೇ ನಿರ್ಮಾಣವಾಗುತ್ತವೆ: ಕಡಿಮೆ ಜನಸಂಖ್ಯೆಯ ಅರಸು ಸಮುದಾಯದವರಾಗಿದ್ದ ದೇವರಾಜ ಅರಸು ಅವರು ಜನಪ್ರಿಯ ನಾಯಕರಾಗಿದ್ದರು. ಅಂತಹ ಮಹಾನ್ ನಾಯಕನಿಗೂ ಮತ್ತು ನನಗೂ ಹೋಲಿಕೆ ಸರಿಯಲ್ಲ. ಅರಸು ಅವರ ಅವಧಿಯಲ್ಲಿ ರಾಜ್ಯದ ಪರಿಸ್ಥಿತಿ ವಿಭಿನ್ನವಾಗಿತ್ತು. ಅವರು ಒಂದು ಬಾರಿ ಚುನಾವಣೆಯನ್ನು ಸರ್ವಾನುಮತದಿಂದಲೂ ಆಯ್ಕೆಯಾಗಿದ್ದರು. ದಾಖಲೆಗಳು ಮುರಿಯಲೆಂದೇ ನಿರ್ಮಾಣವಾಗುತ್ತವೆ. ಪ್ರಸ್ತುತ ನಾನು ಪೂರೈಸಲಿರುವ ಅವಧಿಯನ್ನು ಮೀರಲಿರುವ ಮತ್ತೊಬ್ಬ ನಾಯಕರೂ ಬರಬಹುದು. ನನಗಿಂತ ಹೆಚ್ಚಿನ ಬಾರಿ ಬಜೆಟ್ ಮಂಡಿಸುವ ನಾಯಕರೂ ಮುಂದೆ ಬರಬಹುದು. ಸಾಧನಾ ಸಮಾವೇಶ ಆಯೋಜಿಸುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದರು.

ಸಂಪುಟ ಪುನರ್ರಚನೆ – ಚರ್ಚಿಸಿ ನಿರ್ಧಾರ: ಬಜೆಟ್ ತಯಾರಿಯನ್ನು ಸಂಕ್ರಾಂತಿಯ ನಂತರ ಪ್ರಾರಂಭಿಸಲಾಗುವುದು. ಸಂಪುಟ ಪುನರ್ರಚನೆಯ ಬಗ್ಗೆ ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿಯವರೊಂದಿಗೆ ಚರ್ಚಿಸಲಾಗುವುದು. ಅವರು ಸಮಯ ನೀಡಿದರೆ ಚರ್ಚಿಸಲಿರುವುದಾಗಿ ತಿಳಿಸಿದರು.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯ: ಜಿಎಸ್‌ಟಿ ಕಡಿತ, ವಿಬಿ ಜಿ ರಾಮ್ ಜಿ ಯೋಜನೆ ಜಾರಿಯಂತಹ ಕೇಂದ್ರದ ಕ್ರಮಗಳ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ, ರಾಜ್ಯಕ್ಕೆ ಜಿಎಸ್‌ಟಿಯಿಂದ ವಾರ್ಷಿಕವಾಗಿ 12 ರಿಂದ 15 ಸಾವಿರ ಕೋಟಿ ರೂ. ಗಳು ನಷ್ಟವಾಗುತ್ತಿದ್ದು, ಇದು ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಿಂದಲೂ ಮನರೇಗಾ ಯೋಜನೆಗೆ ಸಂಪೂರ್ಣವಾಗಿ ಕೇಂದ್ರವೇ ಅನುದಾನ ನೀಡುತ್ತಿತ್ತು. ಆದರೆ ಈಗ ಈ ಯೋಜನೆಯನ್ನು ರದ್ದುಪಡಿಸಿದ್ದು, ಇದರಿಂದ ಕಾರ್ಮಿಕರು, ಸಣ್ಣ ರೈತರು, ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಬಡವರಿಗೆ ನೀಡಲಾಗುತ್ತಿದ್ದ ಕೆಲಸದ ದಿನಗಳನ್ನು ಕಡಿಮೆಯಾಗಲಿದ್ದು, ಜನರ ಮೂಲಭೂತ ಹಕ್ಕಿಗಳನ್ನು ಕಸಿದುಕೊಳ್ಳಲಾಗುತ್ತಿದೆ. ಇದು ಅಸಂವಿಧಾನಿಕ ಕ್ರಮ. ಈ ಕಾಯ್ದೆಯಂತೆ ಕಾಮಗಾರಿಗಳಿಗೆ ಕೇಂದ್ರ ಮತ್ತು ರಾಜ್ಯ 60:40 ರಷ್ಟು ಅನುದಾನವನ್ನು ನೀಡಬೇಕಾಗಿದೆ. ಇದರಿಂದ ರಾಜ್ಯ ಸರ್ಕಾರದ ಮೇಲೆ ಸುಮಾರು 3,000 ಕೋಟಿ ರೂ.ಗಳ ಹೊರೆ ಬೀಳಲಿದೆ ಎಂದರು.

Previous articleಕಲಬುರಗಿ: ಲೋಕಾಯುಕ್ತ ತಂಡ ದಿಢೀರ್ ಭೇಟಿ, ಪರಿಶೀಲನೆ