ಮೈಸೂರು: ನಗರದಲ್ಲಿ ಪದೇ ಪದೇ ಕೊಲೆ ಪ್ರಕರಣಗಳು ಸಂಭವಿಸುತ್ತಿದ್ದು ಸಿದ್ದರಾಮಯ್ಯ ಅವರೇ ಯಾವ ಪುರುಷಾರ್ಥಕ್ಕೆ ನೀವು ಸಿಎಂ ಆಗಿದ್ದಿರಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಒಂದರ ಹಿಂದೆ ಒಂದು ಕೊಲೆಯಾಗುತ್ತಿದೆ. ಮೈಸೂರಿನಲ್ಲಿ ಏನಾಗುತ್ತಿದೆ ಎಂಬುದು ಅರ್ಥವಾಗಿಲ್ಲ. ಗೊಂಬೆ ಮಾರಾಟ ಮಾಡಲು ಬಂದಿದ್ದ ಬಾಲಕಿಯ ಅತ್ಯಾಚಾರ ಆಗಿ ಕೊಲೆಯಾಗಿದೆ. ಈ ಬಗ್ಗೆ ಯಾರು ಸಹ ಮಾತನಾಡುತ್ತಿಲ್ಲ ಏಕೆ?
ರಾಜ್ಯ ಸರಕಾರದಲ್ಲಿ ಕೂಗು ಮಾರಿಗಳಿದ್ದಾರೆ. ಉಕ್ರೇನ್, ರಷ್ಯಾದ ಬಗ್ಗೆ ಕಾಮೆಂಟ್ ಮಾಡುತ್ತಾರೆ. ಡೋನಲ್ಡ್ ಟ್ರಂಪ್ ಬಗ್ಗೆ ಮಾತನಾಡುತ್ತಾರೆ. ಬಾಲಕಿ ಕೊಲೆ ಪ್ರಕರಣ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದು ಕೇಳಿದರು. ಪ್ರಿಯಾಂಕ ಖರ್ಗೆ, ಲಾಡ್, ಚಿಕ್ಕಬಳ್ಳಾಪುರದ ಕೂಗು ಮಾರಿ ಇವರಲ್ಲಿ ಒಬ್ಬನಾದರೂ ಬಾಯಿ ತೆರೆಯುತ್ತಿಲ್ಲ. ಸಿಎಂ, ಡಿಸಿಎಂ ಕೂಡ ಇದರ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ. ರಾಜ್ಯ ಪೊಲೀಸರಿಗೆ ದಕ್ಷತೆ ಇದೆ. ಅದರೆ ಕೆಲಸ ಮಾಡಲು ಮುಕ್ತ ವಾತಾವರಣ ಇಲ್ಲ ಎಂದು ದೂರಿದರು.
ದೋಸೆ ತಿನ್ನಲು ಸೀಮಿತ: ಸಿಎಂ ನಳಪಾಕ್‌ನಲ್ಲಿ ಕಾಫಿ ಕುಡಿಯಲು, ಮೈಲಾರಿ ದೋಸೆ ತಿನ್ನಲು ಅಷ್ಟೆ ಪೊಲೀಸರ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಚಿವ ಮಹದೇವಪ್ಪ ಬರೀ ಸಂವಿಧಾನ ಪೀಠಿಕೆ ಓದಿಸೋದು ಬಿಟ್ಟರೆ ಬೇರೆ ಏನೂ ಮಾಡುತ್ತಿಲ್ಲ. ಸಿಎಂ ಅವರಿಗೆ ಅಂತಃಕರಣವೆ ಇಲ್ಲ. ಸಿಎಂ ಹೃದಯ ಕಲ್ಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರ್ಗಾವಣೆ ಸಚಿವ ಯತೀಂದ್ರ: ಪೊಲೀಸರಿಗೆ ಸಿಎಂ ಪುತ್ರ ಯತೀಂದ್ರ ಅವರಿಂದ ಕಾಟ ಹೆಚ್ಚಾಗಿದೆ. ಯತೀಂದ್ರ ವರ್ಗಾವಣೆ ಸಚಿವರಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಮಿನೀಟ್ ಕಾಟ, ಜಾತಿ ಕಾಟ ಜಾಸ್ತಿ ಆಗಿದೆ. ಯಾವ ವರ್ಗಾವಣೆ ಆಗ ಬೇಕಾದರೂ ಸಿಎಂ ಪುತ್ರನಿಗೆ ತೆರಿಗೆ ಕಟ್ಟ ಬೇಕು ಎಂದು ಆಪಾದಿಸಿದರು.
ಕಲೆಕ್ಷನ್ ವಿಚಾರದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪೈಪೋಟಿ ಗೆ ಇಳಿದಿದ್ದಾರೆ. ಯಾರು ಜಾಸ್ತಿ ಕಲೆಕ್ಷನ್ ಮಾಡಿ ರಾಹುಲ್ ಗಾಂಧಿಗೆ ಕೊಡುವುದರಲ್ಲಿ ಇಬ್ಬರ ನಡುವೆ ಪೈಪೋಟಿ ನಡೆಯುತ್ತಿದೆ ಎಂದು ಆರೋಪಿಸಿದರು. ಯಾವ ಜಾತಿಯವನೂ ಆರೋಪಿ ಎಂದು ನೋಡಿ ನಂತರ ಅವನನ್ನು ಹಿಡಿಯ ಬೇಕಾದ ಸ್ಥಿತಿ ಮೈಸೂರು ಪೊಲೀಸರಿಗೆ ಬಂದಿದೆ.
ನಗರದಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿದೆ. ಅದರ ಮೇಲೂ ಪೊಲೀಸರ ದಾಳಿ ನಡೆಸಲು ಹೆದರುತ್ತಿದ್ದಾರೆ. ಯಾವ ಸಚಿವನ, ಶಾಸಕನ ಫೋನ್ ಬರುತ್ತದೆ ಎಂಬ ಭಯದಿಂದ ಪೊಲೀಸರು ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಗೃಹ ಸಚಿವರು ಸಿಎಂ ಕುರ್ಚಿ ಖಾಲಿ ಆದರೆ ತನಗೆ ಸಿಗಲಿದೆ ಎಂದು ಭಾವಿಸಿ ಗೃಹ ಇಲಾಖೆಯನ್ನೆ ಮೆರೆತಿದ್ದಾರೆ ಎಂದು ಹೇಳಿದರು.
ವರ್ಗಾವಣೆ ದಂಧೆ ನಿಲ್ಲಿಸಲು ಮಗನಿಗೆ ಹಾಗೂ ವಸೂಲಿ ಮಾಡುವುದನ್ನು ನಿಲ್ಲಿಸುವಂತೆ ಶಾಸಕರಿಗೆ ಸಿಎಂ ಬುದ್ದಿವಾದ ಹೇಳಬೇಕು. ಇಲ್ಲದಿದ್ದರೆ ನೀವೆ ವಸೂಲಿ ಮಾಡಲು ಬಿಟ್ಟಿದ್ದಾರಾ ಎಂದು ತಿಳಿದುಕೊಳ್ಳಬೇಕು ಎಂದರು. ಸಿದ್ದರಾಮಯ್ಯ ಅವರೇ ನಿಮಗೆ ಹೆಣ್ಣು ಮಕ್ಕಳು ಇಲ್ಲದೆ ಇರಬಹುದು. ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ವಾ? ಬಾಲಕಿ ಅತ್ಯಾಚಾರ ಬಗ್ಗೆ ಮಾತನಾಡಿ ಎಂದು ಆಗ್ರಹಿಸಿದರು.
ಸುದೀಪ್ ಮೇಲಿನ ದ್ವೇಷಕ್ಕೆ ಬಿಗ್ ಬಾಸ್ ಬಾಗಿಲು ಹಾಕಿಸಲಾಗಿದೆ. ಇದು ದೌರ್ಜನ್ಯ ಸರಕಾರ. ನಾನು ರಾಜ್ಯ ರಾಜಕಾರಣದಲ್ಲೆ ಇದ್ದಿನಿ. ಲೋಕಸಭೆಯಲ್ಲಿ ಟಿಕೆಟ್ ಕೊಡದವರಿಗೆ ವಿಧಾನಸಭೆಯಲ್ಲಿ ಕೊಟ್ಟಿದ್ದಾರೆ. ಅದರಲ್ಲಿ ಒಬ್ಬರು ಡಿಸಿಎಂ ಕೂಡ ಆಗಿದ್ದಾರೆ ಎಂದು ಸೂಚ್ಯವಾಗಿ ಹೇಳಿದರು.