ಮೈಸೂರು: ಜಿಲ್ಲೆಯ ಸರಗೂರು ತಾಲ್ಲೂಕಿನ ಬಿ. ಮಟಕೆರೆ ಎಸ್.ಟಿ. ಕಾಲೋನಿಯಲ್ಲಿ ಇಂದು ಬೆಳಗಿನ ಜಾವ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ದೇವಸ್ಥಾನದ ಕಾವಲುಗಾರನಾಗಿದ್ದ ಮಾದ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.
ಮೃತ ಮಾದ ಅವರು ಎಂದಿನಂತೆ ಬೆಳಗಿನ ಜಾವ ಬಹಿರ್ದೆಸೆಗೆಂದು ಹೊರಬಂದಾಗ, ಹಠಾತ್ ಆಗಿ ಕಾಡಿನಿಂದ ನಾಡಿಗೆ ನುಗ್ಗಿದ್ದ ಆನೆಯೊಂದು ದಾಳಿ ನಡೆಸಿದೆ. ಅಚಾನಕ್ ನಡೆದ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಮಾದ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಮೈಸೂರು: ಅಧಿಕಾರಿಗಳ ಮನೆ ಸೇರಿದಂತೆ ಏಳು ಕಡೆ ಲೋಕಾ ದಾಳಿ
ಮಾದ ಅವರ ಚೀರಾಟ ಕೇಳಿ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು, ಕೂಗಾಟ ಹಾಗೂ ಗದ್ದಲ ಮಾಡಿ ಆನೆಯನ್ನು ಕಾಡಿನತ್ತ ಓಡಿಸಿದ್ದಾರೆ. ಆದರೆ ಅದಾಗಲೇ ಮಾದ ಅವರಿಗೆ ಗಂಭೀರ ಗಾಯಗಳಾಗಿದ್ದು, ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮದಲ್ಲಿ ಆಕ್ರೋಶದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳು ಆಗಾಗ ಗ್ರಾಮ ಪ್ರದೇಶಕ್ಕೆ ನುಗ್ಗುತ್ತಿದ್ದರೂ, ಅವುಗಳನ್ನು ತಡೆಯಲು ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಮೈಸೂರು — ಸಿಗರೇಟ್ ಫೋಟೋಶೂಟ್ ವಿವಾದ: ಮತ್ತೆ ಸಂಕಷ್ಟದಲ್ಲಿ ಬಿಗ್ ಬಾಸ್ ಸ್ಪರ್ಧಿ ರಜತ್
ಕಾಡು–ನಾಡು ಸಂಘರ್ಷ ದಿನೇದಿನೇ ಹೆಚ್ಚಾಗುತ್ತಿದ್ದು, ಜನರ ಜೀವಕ್ಕೆ ಅಪಾಯ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ. ಶಾಶ್ವತ ಪರಿಹಾರ ಕೈಗೊಳ್ಳುವಂತೆ ಹಾಗೂ ಕಾಡಾನೆಗಳ ಸಂಚಾರವನ್ನು ನಿಯಂತ್ರಿಸಲು ಬೇಲಿ, ತಡೆಗೋಡೆ ಮತ್ತು ಎಚ್ಚರಿಕೆ ವ್ಯವಸ್ಥೆಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: NH-50ರಲ್ಲಿನ ಕಾರ್ ಸರ್ವೀಸ್ ಸೆಂಟರ್‌ನಲ್ಲಿ ಭಾರೀ ಅಗ್ನಿ ಅವಘಡ
ಈ ಘಟನೆ ಮತ್ತೊಮ್ಮೆ ಕಾಡು–ನಾಡು ಸಂಘರ್ಷದ ಗಂಭೀರತೆಯನ್ನು ಬೆಳಕಿಗೆ ತಂದಿದ್ದು, ಜನರ ಸುರಕ್ಷತೆಗಾಗಿ ತುರ್ತು ಕ್ರಮಗಳ ಅಗತ್ಯವಿದೆ ಎಂಬುದನ್ನು ಒತ್ತಿ ಹೇಳುತ್ತಿದೆ.





















