ಮೈಸೂರು ಅರಮನೆ ಮುಂಭಾಗ ಗ್ಯಾಸ್ ಸಿಲಿಂಡರ್ ಸ್ಫೋಟ: ಓರ್ವ ಸಾವು, ಹಲವರಿಗೆ ಗಂಭೀರ ಗಾಯ

0
4

ಮೈಸೂರು: ನಗರದ ಪ್ರವಾಸಿ ಆಕರ್ಷಣೆಯ ಕೇಂದ್ರವಾಗಿರುವ ಮೈಸೂರು ಅರಮನೆ ಮುಂಭಾಗ ಗುರುವಾರ ರಾತ್ರಿ ಸುಮಾರು 8.30ರ ವೇಳೆಗೆ ಸಂಭವಿಸಿದ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ ಭಾರೀ ದುರಂತಕ್ಕೆ ಕಾರಣವಾಗಿದೆ. ಈ ಘಟನೆಯಲ್ಲಿ ಬಲೂನ್ ವ್ಯಾಪಾರಿಯೊಬ್ಬರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅರಮನೆ ಮುಂಭಾಗದ ಜಯ ಮಾರ್ತಾಂಡ ದ್ವಾರದ ಬಳಿ ಬಲೂನ್‌ಗಳಿಗೆ ಹೀಲಿಯಂ ಗ್ಯಾಸ್ ತುಂಬುವ ವೇಳೆ, ಬಳಸಲಾಗುತ್ತಿದ್ದ ಹೀಲಿಯಂ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಸ್ಥಳದಲ್ಲಿದ್ದ ಜನರು ಬೆಚ್ಚಿಬಿದ್ದಿದ್ದು, ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ: ಚಿತ್ರದುರ್ಗ ಬಸ್‌ ಅಪಘಾತ ಪ್ರಕರಣ : ಬದುಕುಳಿಯದ ಬಸ್ ಚಾಲಕ

ಸ್ಫೋಟದಲ್ಲಿ ಬಲೂನ್ ವ್ಯಾಪಾರಿ ಸಲೀಂ (40) ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತ ಸಲೀಂ ಅವರು ಉತ್ತರ ಪ್ರದೇಶದ ಕನೋಜ್ ಜಿಲ್ಲೆಯ ತೋಫಿಯಾ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಸಲೀಂ ವಿರುದ್ಧ ಕೆ.ಆರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ದುರಂತದಲ್ಲಿ ಬೆಂಗಳೂರು ಮೂಲದ ಲಕ್ಷ್ಮಿ (45). ನಂಜನಗೂಡು ಮೂಲದ ಮಂಜುಳಾ. ಕೊಲ್ಕತ್ತಾ ಮೂಲದ ಶಹನಾಜ್ ಶಬ್ಬೀರ್. ರಾಣೇಬೆನ್ನೂರು ಮೂಲದ ಕೊಟ್ರೇಶ್ ಗುಟ್ಟೆ. ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಬೆಂಗಳೂರು ಮೂಲದ ಲಕ್ಷ್ಮಿ ಅವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Train Fare: ಇಂದಿನಿಂದ ರೈಲು ಪ್ರಯಾಣ ದರ ಏರಿಕೆ

ಘಟನೆ ಕುರಿತು ಮಾಹಿತಿ ಪಡೆದ ಕೆ.ಆರ್ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಫೋಟಕ್ಕೆ ನಿಖರ ಕಾರಣವೇನು, ಸಿಲಿಂಡರ್ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಾಗಿತ್ತೇ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಜನಸಂದಣಿ ಇರುವ ಪ್ರವಾಸಿ ಪ್ರದೇಶದಲ್ಲಿ ಈ ರೀತಿಯ ಅಪಾಯಕಾರಿ ಗ್ಯಾಸ್ ಸಿಲಿಂಡರ್ ಬಳಕೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

Previous articleಅಕ್ರಮ ಕಲ್ಲುಗಣಿಗಾರಿಕೆ: ಕ್ವಾರೆಯಲ್ಲಿ ಟಿಪ್ಪರ್ ವಾಹನ ಬಿದ್ದು ಚಾಲಕ ಸಾವು