Home ನಮ್ಮ ಜಿಲ್ಲೆ ಮೈಸೂರು ಮೈಸೂರು: ಭ್ರೂಣ ಹತ್ಯೆ ರಾಕೆಟ್ ಭೇದಿಸಿದ ಆರೋಗ್ಯ ಇಲಾಖೆ

ಮೈಸೂರು: ಭ್ರೂಣ ಹತ್ಯೆ ರಾಕೆಟ್ ಭೇದಿಸಿದ ಆರೋಗ್ಯ ಇಲಾಖೆ

0

ಮೈಸೂರು: ಮಾನವೀಯತೆಯನ್ನು ಬೆಚ್ಚಿಬೀಳಿಸುವ ಘಟನೆ ಮೈಸೂರು ತಾಲೂಕಿನ ಹನುಗನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ಐಷಾರಾಮಿ ಮನೆಯೊಂದನ್ನು ಸ್ಕ್ಯಾನಿಂಗ್ ಸೆಂಟರ್ ಆಗಿ ಮಾರ್ಪಡಿಸಿ, ಭ್ರೂಣ ಪತ್ತೆ ಹಾಗೂ ಹೆಣ್ಣು ಮಗುವಿನ ಗರ್ಭಪಾತ ನಡೆಸುತ್ತಿದ್ದ ಕೃತ್ಯ ಪತ್ತೆಯಾಗಿದೆ.

ಖಚಿತ ಮಾಹಿತಿಯ ಮೇರೆಗೆ ಆರೋಗ್ಯ ಇಲಾಖೆ ಹಾಗೂ ಪೊಲೀಸರ ಜಂಟಿ ತಂಡವು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಮನೆಯಲ್ಲಿ ಅತ್ಯಾಧುನಿಕ ಸ್ಕ್ಯಾನಿಂಗ್ ಮಿಷನ್‌ಗಳನ್ನು ಅಳವಡಿಸಿಕೊಂಡು ಅಕ್ರಮವಾಗಿ ಸ್ಕ್ಯಾನಿಂಗ್ ನಡೆಸಲಾಗುತ್ತಿತ್ತು. ಗರ್ಭಿಣಿಯ ಹೊಟ್ಟೆಯಲ್ಲಿರುವ ಮಗು ಗಂಡು ಅಥವಾ ಹೆಣ್ಣು ಎಂಬುದನ್ನು ಪತ್ತೆಹಚ್ಚಿ, ಹೆಣ್ಣು ಮಗುವಾಗಿದ್ದರೆ ಗರ್ಭಪಾತ ಮಾಡುವ ಅಮಾನುಷ ಕೆಲಸ ಇಲ್ಲಿ ನಡೆಯುತ್ತಿತ್ತು ಎಂದು ಮಾಹಿತಿ ಸಿಕ್ಕಿದೆ.

ಆರೋಗ್ಯ ಇಲಾಖೆ ಉಪನಿರ್ದೇಶಕ ಡಾ. ವಿವೇಕ್, ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ಮತ್ತು ಮೈಸೂರು ಡಿಎಚ್‌ಓ ಡಾ. ಪಿ.ಸಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ತಂಡವು ಅಕ್ರಮ ಸ್ಕ್ಯಾನಿಂಗ್ ಉಪಕರಣಗಳನ್ನು ವಶಪಡಿಸಿಕೊಂಡಿದೆ.

ಆಶ್ಚರ್ಯಕರ ವಿಷಯವೇನೆಂದರೆ, ಈ ಕೃತ್ಯವನ್ನು ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಟಾರ್ಗೆಟ್ ಮಾಡಿ ನಡೆಸಲಾಗುತ್ತಿತ್ತು. ಸ್ಕ್ಯಾನಿಂಗ್ ಮತ್ತು ಗರ್ಭಪಾತಕ್ಕಾಗಿ ಲಕ್ಷ ಲಕ್ಷ ರೂಪಾಯಿಗಳನ್ನು ವಸೂಲಿಸುತ್ತಿದ್ದರು. ವೈದ್ಯಕೀಯ ನೈತಿಕತೆಯ ಮಿತಿಗಳನ್ನು ಮೀರಿ ದುಡ್ಡಿಗಾಗಿ ಮಾನವೀಯತೆ ಮಾರಾಟ ಮಾಡುತ್ತಿದ್ದ ಈ ಘಟನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಈ ರೀತಿಯ ಅಕ್ರಮ ಸ್ಕ್ಯಾನಿಂಗ್ ಕೇಂದ್ರಗಳು ಇನ್ನೂ ಅಸ್ತಿತ್ವದಲ್ಲಿದೆಯೇ ಎಂಬುದರ ಬಗ್ಗೆ ಆರೋಗ್ಯ ಇಲಾಖೆ ತೀವ್ರ ತನಿಖೆ ಆರಂಭಿಸಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version