ಮೈಸೂರು ದಸರಾ 2025ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಹ್ವಾನಿಸುವ ಕಾರ್ಯಕ್ರಮ ಗುರುವಾರ ಬೆಂಗಳೂರು ನಗರದ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನೆರವೇರಿತು. ಸೆಪ್ಟೆಂಬರ್ 22ರಿಂದ 11 ದಿನಗಳ ಕಾಲ ನಡೆಯಲಿರುವ ಮೈಸೂರು ದಸರಾ ಮಹೋತ್ಸವಕ್ಕೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ನೇತೃತ್ವದಲ್ಲಿ ಜಿಲ್ಲಾಡಳಿತದ ತಂಡವು ಸಿದ್ದರಾಮಯ್ಯಗೆ ಸಾಂಪ್ರದಾಯಿಕವಾಗಿ ಫಲಪುಷ್ಪ, ರೇಷ್ಮೆ ಶಾಲು ಮತ್ತು ಹಾರವನ್ನು ಸಮರ್ಪಿಸಿ ಗೌರವ ಸಲ್ಲಿಸಿ, ಅಧಿಕೃತ ಆಹ್ವಾನ ಪತ್ರಿಕೆ ಹಸ್ತಾಂತರಿಸಿತು.
ಮೈಸೂರು ದಸರಾ ರಾಜ್ಯದ ಸಾಂಸ್ಕೃತಿಕ ವೈಭವವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಹಬ್ಬವಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಮಂದಿ ದೇಶ-ವಿದೇಶಗಳಿಂದ ಆಗಮಿಸಿ ಸಾಕ್ಷಿಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಭವ್ಯ ಸಿದ್ಧತೆಗಳನ್ನು ಕೈಗೊಂಡಿದೆ.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿಪಂ ಸಿಇಓ ಎಸ್. ಯುಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜು, ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ಸೇರಿದಂತೆ ಸ್ವಾಗತ ಸಮಿತಿಯ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಹದೇವಪ್ಪ, “ದಸರಾ ಕೇವಲ ಮೈಸೂರು ಜಿಲ್ಲೆಯ ಹಬ್ಬವಲ್ಲ, ಅದು ಕರ್ನಾಟಕದ ಸಾಂಸ್ಕೃತಿಕ ಅಸ್ತಿತ್ವವನ್ನು ಜಗತ್ತಿಗೆ ತೋರಿಸುವ ವೇದಿಕೆ. ಸರ್ಕಾರದ ಪರವಾಗಿ ಎಲ್ಲಾ ಸಿದ್ಧತೆಗಳು ಭವ್ಯವಾಗಿ ನಡೆಯುತ್ತಿವೆ. ಈ ಬಾರಿಯ ದಸರಾ ಹೆಚ್ಚಿನ ವೈಶಿಷ್ಟ್ಯತೆಯಿಂದ ಕೂಡಿರಲಿದೆ,” ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಹ್ವಾನ ಸ್ವೀಕರಿಸಿ, “ಮೈಸೂರು ದಸರಾ ನನ್ನ ಹೃದಯಕ್ಕೆ ಹತ್ತಿರವಾದ ಹಬ್ಬ. ಸರ್ಕಾರ ಮತ್ತು ಜಿಲ್ಲಾಡಳಿತ ಎಲ್ಲರ ಸಹಕಾರದೊಂದಿಗೆ ಈ ಬಾರಿಯೂ ಯಶಸ್ವಿಯಾಗಿ ನೆರವೇರಲಿದೆ. ಜನರ ಸಹಕಾರವೇ ಈ ಹಬ್ಬದ ಆತ್ಮ” ಎಂದು ಹೇಳಿದರು.
ಮೈಸೂರು ದಸರಾ ಕಾರ್ಯಕ್ರಮಗಳು ನವರಾತ್ರಿ ಆರಂಭದಿಂದ ವಿಜಯದಶಮಿಯವರೆಗೆ ನಡೆಯಲಿದ್ದು, ರಾಜಮನೆತನದ ಪರಂಪರೆ, ಅಂಬಾರಿ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜನಪದ ಕಲೆಗಳೊಂದಿಗೆ ರಾಜ್ಯದ ಕಲೆ-ಸಂಸ್ಕೃತಿಯನ್ನು ಮೆರೆದಿಡಲಿವೆ.