ಮೈಸೂರು ವಿವಿ : ರಾಜೇಂದ್ರಸಿಂಗ್ ಬಾಬು ಸೇರಿ ಮೂವರಿಗೆ ಗೌರವ ಡಾಕ್ಟರೇಟ್

0
41

ಮೈಸೂರು: ಚಲನಚಿತ್ರ ನಿರ್ದೇಶಕ–ನಿರ್ಮಾಪಕ ಎಸ್.ವಿ. ರಾಜೇಂದ್ರಸಿಂಗ್ ಬಾಬು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ. ಶ್ಯಾಮ್‌ಭಟ್ ಹಾಗೂ ಗ್ಲೋಬಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ, ಶಿಕ್ಷಣ ತಜ್ಞ ಪಿ. ಜಯಚಂದ್ರರಾಜು ಅವರನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪ್ರದಾನ ಮಾಡಲಾಗುವ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಲಾಗಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್, ಜ.5 ರಂದು ಬೆಳಿಗ್ಗೆ 11.30ಕ್ಕೆ ಕ್ರಾಫರ್ಡ್ ಭವನದಲ್ಲಿ ನಡೆಯುವ 106ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸೇರಿದಂತೆ ವಿವಿಧ ಪದವಿಗಳ ಪ್ರದಾನ ನಡೆಯಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:  ಮದ್ದಳೆ ಮಾಂತ್ರಿಕ ಕರ್ಕಿ ಪ್ರಭಾಕರ ಭಂಡಾರಿ ನಿಧನ

ಘಟಿಕೋತ್ಸವಕ್ಕೆ ಗಣ್ಯರ ಆಗಮನ: ಈ ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸಲಿದ್ದು, ಇಸ್ರೋ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಉಪಸ್ಥಿತರಿರುವರು ಎಂದು ಅವರು ಹೇಳಿದರು.

30,966 ಅಭ್ಯರ್ಥಿಗಳಿಗೆ ಪದವಿ ಪ್ರದಾನ: ಘಟಿಕೋತ್ಸವದಲ್ಲಿ ಒಟ್ಟು 30,966 ಅಭ್ಯರ್ಥಿಗಳಿಗೆ ವಿವಿಧ ಪದವಿಗಳು ಪ್ರದಾನಗೊಳ್ಳಲಿವೆ. ಇದರಲ್ಲಿ 18,612 ಮಹಿಳೆಯರು. 12,353 ಪುರುಷರು ಪದವಿ ಸ್ವೀಕರಿಸಲಿದ್ದಾರೆ. ಇದಲ್ಲದೆ, 449 ಅಭ್ಯರ್ಥಿಗಳಿಗೆ ಪಿಎಚ್.ಡಿ ಪದವಿ (258 ಪುರುಷರು, 211 ಮಹಿಳೆಯರು) 442 ಪದಕಗಳು ಹಾಗೂ 197 ಬಹುಮಾನಗಳು ಸೇರಿದಂತೆ ಒಟ್ಟು 213 ಅಭ್ಯರ್ಥಿಗಳು ಪುರಸ್ಕೃತರಾಗಲಿದ್ದು, ಇವರಲ್ಲಿ 158 ಮಹಿಳೆಯರು ಸೇರಿದ್ದಾರೆ.

ಇದನ್ನೂ ಓದಿ:  ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ರಾಷ್ಟ್ರ ಮಟ್ಟದಲ್ಲಿ 3ನೇ ಸ್ಥಾನ

ಸ್ನಾತಕೋತ್ತರ ವಿಭಾಗದಲ್ಲಿ 5,796 ಅಭ್ಯರ್ಥಿಗಳು ಪದವಿ ಪಡೆಯಲಿದ್ದು, ಇವರಲ್ಲಿ 1,485 ಮಹಿಳೆಯರು ಇದ್ದಾರೆ. ಇಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರರಲ್ಲಿ 141 ಜನರಲ್ಲಿ 71 ಮಹಿಳೆಯರು ಸೇರಿದ್ದಾರೆ ಎಂದು ಕುಲಪತಿ ವಿವರಿಸಿದರು.

ವಿಶ್ವವಿದ್ಯಾಲಯದಿಂದ ನೇರವಾಗಿ ಪದಕ ನೀಡುವುದಿಲ್ಲ. ದಾನಿಗಳ ಮೂಲಕ ನೀಡಲಾಗುವ ಪದಕ ಮತ್ತು ನಗದು ಬಹುಮಾನಗಳನ್ನು ಆಯಾ ವಿಷಯಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: 153 ಎಕರೆಗಳಲ್ಲಿ ‘ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ’ – ಸಚಿವ ಸಂಪುಟದ ಒಪ್ಪಿಗೆ

ಗೌರವ ಡಾಕ್ಟರೇಟ್‌ಗೆ ಆಯ್ಕೆ ಹಿನ್ನೆಲೆ: ಈ ಬಾರಿ ಗೌರವ ಡಾಕ್ಟರೇಟ್‌ಗೆ 26 ಗಣ್ಯರ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು. ರಾಜ್ಯಪಾಲರ ನೇತೃತ್ವದ ಸಮಿತಿಯು ಮೂವರನ್ನು ಅಂತಿಮವಾಗಿ ಆಯ್ಕೆ ಮಾಡಿದೆ ಎಂದು ತಿಳಿಸಿದರು.

ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರು ಬಾಲಕಲಾವಿದರಾಗಿ ವೃತ್ತಿ ಆರಂಭಿಸಿ, ತಮ್ಮ ತಂದೆಗೆ ಸಹಾಯಕರಾಗಿ ಚಲನಚಿತ್ರ ರಂಗದಲ್ಲಿ ಅಪಾರ ಅನುಭವ ಪಡೆದುಕೊಂಡವರು. ಅವರ ಚಲನಚಿತ್ರಗಳ ನೈಪುಣ್ಯತೆಗೆ ಹಾಲಿವುಡ್ ವಲಯದಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದ್ದು, ಕನ್ನಡ ಚಿತ್ರರಂಗಕ್ಕೆ ನೀಡಿದ ಮಹತ್ವದ ಕೊಡುಗೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಲಾಗಿದೆ.

ಡಾ.ಟಿ. ಶ್ಯಾಮ್‌ಭಟ್ ಅವರು ಲೋಕಸೇವಾ ಆಯೋಗದ ಅಧ್ಯಕ್ಷ ಸೇರಿದಂತೆ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಮಾನವ ಹಕ್ಕುಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಆಡಳಿತಾತ್ಮಕ ಮತ್ತು ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಲಾಗಿದೆ.

ಪಿ. ಜಯಚಂದ್ರರಾಜು ಅವರು ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.

ಈ ಹಿಂದೆ ಮೈಸೂರು ವಿಶ್ವವಿದ್ಯಾಲಯದಿಂದ ಡಾ. ರಾಜ್‌ಕುಮಾರ್, ಎಸ್. ಜಾನಕಿ, ಬಿ. ಸರೋಜಾದೇವಿ, ಪುನೀತ್ ರಾಜ್‌ಕುಮಾರ್ ಸೇರಿದಂತೆ ಅನೇಕ ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ ಎಂದು ಕುಲಪತಿ ಸ್ಮರಿಸಿದರು

Previous articleಮದ್ದಳೆ ಮಾಂತ್ರಿಕ ಕರ್ಕಿ ಪ್ರಭಾಕರ ಭಂಡಾರಿ ನಿಧನ
Next articleಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಮೂವರು ಬಾಲಕರು ಅರೆಸ್ಟ್