ಕ್ರೀಡಾಂಗಣ ನಿರ್ಮಾಣದ ಹೆಸರಿನಲ್ಲಿ KSIC ಜಾಗ ಕಬಳಿಕೆ? ರಾಜಕೀಯ ಚರ್ಚೆ ತೀವ್ರ
ಬೆಂಗಳೂರು / ಮೈಸೂರು: ಕರ್ನಾಟಕದ ಹೆಮ್ಮೆಯ ಪರಂಪರೆಯ ಪ್ರತೀಕವಾಗಿರುವ Karnataka Silk Industries Corporation (KSIC)ಗೆ ಸೇರಿದ ಜಾಗವನ್ನು ಸರ್ಕಾರ ಕ್ರೀಡಾಂಗಣ ನಿರ್ಮಾಣಕ್ಕಾಗಿ ಪಡೆದುಕೊಳ್ಳಲು ಮುಂದಾಗಿರುವ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಮಾಡಿ ಕರ್ನಾಟಕದ ಪಾರಂಪರಿಕ ಬ್ರಾಂಡ್ ‘ಮೈಸೂರು ಸಿಲ್ಕ್’ ಅಸ್ತಿತ್ವಕ್ಕೆ ಧಕ್ಕೆಯುಂಟು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಮೈಸೂರು ಸಿಲ್ಕ್ ಸೀರೆ: ನಾರಿಯರಿಗೆ ಇನ್ನು ಕನಸು?
‘ಅತ್ಯಗತ್ಯ ಜಾಗ ಕಬಳಿಸುವ ಯತ್ನ’ ಆರೋಪ : ಟಿ. ನರಸೀಪುರದಲ್ಲಿರುವ KSIC ಘಟಕದ ಮುಂದಿನ ಅಭಿವೃದ್ಧಿ, ಮಾಲಿನ್ಯ ನಿಯಂತ್ರಣ ಘಟಕ (ETP) ಸ್ಥಾಪನೆ ಹಾಗೂ ಹೆಚ್ಚುವರಿ ಉತ್ಪಾದನೆಗಾಗಿ 5 ಎಕರೆ ಜಾಗ ಅತ್ಯಗತ್ಯವೆಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಾಂತ್ರಿಕ ವರದಿ ಸಲ್ಲಿಸಿದ್ದರೂ, ಸರ್ಕಾರ ಆ ಜಾಗವನ್ನು ಕ್ರೀಡಾಂಗಣ ನಿರ್ಮಾಣಕ್ಕಾಗಿ ಕಿತ್ತುಕೊಳ್ಳಲು ಮುಂದಾಗಿದೆ ಎಂದು ಆರ್.ಅಶೋಕ ಹೇಳಿದ್ದಾರೆ.
ಪ್ರತಿ ದಿನ ಸುಮಾರು 5 ಲಕ್ಷ ಲೀಟರ್ ನೀರು ಬಳಸುವ ರೇಷ್ಮೆ ನೂಲು ಘಟಕಕ್ಕೆ ಅಗತ್ಯವಿರುವ ಪೈಪ್‌ಲೈನ್ ವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಇದರಿಂದ ಇಡೀ ಘಟಕವೇ ಸ್ಥಗಿತಗೊಳ್ಳುವ ಅಪಾಯವಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದರೂ, ಸರ್ಕಾರ ವರದಿಯನ್ನು ಕಡೆಗಣಿಸಿದೆ ಎಂಬ ಆರೋಪವೂ ಕೇಳಿಬಂದಿದೆ.
ಕಾರ್ಮಿಕರು ಮತ್ತು ರೈತರ ಭವಿಷ್ಯ ಪ್ರಶ್ನೆ : ಈ ಘಟಕದಲ್ಲಿ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಸಾವಿರಾರು ರೇಷ್ಮೆ ಬೆಳೆಗಾರರು KSIC ಮೇಲೆ ಅವಲಂಬಿತರಿದ್ದಾರೆ. ಜಾಗ ಕಬಳಿಸುವ ಕ್ರಮದಿಂದ ಅವರ ಜೀವನೋಪಾಯಕ್ಕೆ ಹೊಡೆತ ಬೀಳಲಿದೆ ಎಂದು ಆರ್.ಅಶೋಕ ಎಚ್ಚರಿಸಿದ್ದಾರೆ.
ಕಾರ್ಖಾನೆ ಕಾಯ್ದೆಯಡಿ ಶೇ.30 ರಷ್ಟು ಜಾಗವನ್ನು ಹಸಿರು ವಲಯವಾಗಿ ಉಳಿಸಬೇಕು ಎಂಬ ನಿಯಮವಿದೆ. ಆ ಜಾಗವನ್ನು ಕಡಿತಗೊಳಿಸಿದರೆ ಕಾರ್ಖಾನೆ ಕಾನೂನುಬಾಹಿರ ಸ್ಥಿತಿಗೆ ಬರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಪ್ರಶ್ನೆಗಳ ಸುರಿಮಳೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉದ್ದೇಶಿಸಿ, “ಮೈಸೂರು ಸಿಲ್ಕ್ ಬ್ರಾಂಡ್ ಅನ್ನು ದುರ್ಬಲಗೊಳಿಸುವ ಹಿಂದೆ ಯಾರ ಹಿತಾಸಕ್ತಿ ಇದೆ?”, “ಈ ನಿರ್ಧಾರದ ಹಿಂದೆ ಯಾವ ಲೂಟಿಯ ಸಂಚು ಅಡಗಿದೆ?” ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಈ ವಿಚಾರದಲ್ಲಿ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ತೀವ್ರತೆ ಹೆಚ್ಚುವ ಸಾಧ್ಯತೆ ಇದೆ.























