ಮೈಸೂರು ದಸರಾ 2025: ಯುವ ಸಂಭ್ರಮಕ್ಕೆ ಅದ್ಧೂರಿ ತೆರೆ

0
37

ಮೈಸೂರು: ದಸರಾ ಮಹೋತ್ಸವದ ಯುವ ಸಂಭ್ರಮವು ಯುವ ಮನಸ್ಸುಗಳು ಮತ್ತು ಪ್ರೇಕ್ಷಕರಿಗೆ ಮನೋಲ್ಲಾಸ ಮತ್ತು ಮನರಂಜನೆ ನೀಡಿ ಇಂದು ಅದ್ಧೂರಿಯಾಗಿ ತೆರೆ ಕಂಡಿತು.

ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಗುರುವಾರ ನಡೆದ 9ನೇ ಹಾಗೂ ಅಂತಿಮ ದಿನದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಬಯಲು ರಂಗಮಂದಿರ ಕಿಕ್ಕಿರಿದು ತುಂಬಿತ್ತು.

ಕನ್ನಡ ನಾಡು ನುಡಿ, ರಾಷ್ಟ್ರೀಯ ಭಾವೈಕ್ಯತೆ, ದೇಶ ಭಕ್ತಿ, ಶಾಸ್ತ್ರೀಯ ಕಲೆಗಳು, ಐತಿಹಾಸಿಕ, ಪೌರಾಣಿಕ ಹಾಗೂ ಜಾನಪದ ಸಿನಮಾಧಾರಿತ ನೃತ್ಯ ರೂಪಕಗಳು ಯುವ ಸಮೂಹವನ್ನು ನೃತ್ಯದ ಕಡಲ್ಲಿ ತೇಲಿಸಿತು.

ಶ್ರೀರಂಗಪಟ್ಟಣದ ಡಿ ಪಾಲ್ ಕಾಲೇಜು ವಿದ್ಯಾರ್ಥಿಗಳು ಹಲವು ಬಾರಿ ಚಿನ್ನದ ಅಂಬಾರಿ ಹೊತ್ತು ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಹುತಾತ್ಮವಾದ ವೀರ, ಸೌಮ್ಯ ಸ್ವಭಾವದ ಅರ್ಜುನ ಆನೆ ಕುರಿತ ನೃತ್ಯ ರೂಪಕದ ಮೂಲಕ ಸ್ಮರಿಸಿದಾಗ ನೆರೆದಿದ್ದ ಜನರು ಎದ್ದು ನಿಂತು ಗೌರವ ವಂದನೆ ಸಲ್ಲಿಸಿದರು.

ಕರ್ನಾಟಕ ರತ್ನ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನ ಬನುಮಯ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿಷ್ಣುವರ್ಧನ್ ಅಭಿನಯದ ಹಾಡುಗಳಿಗೆ ಹೆಜ್ಜೆ ಹಾಕುವಾಗ ಇಡೀ ಯುವ ಸಮೂಹ ಎದ್ದು ನಿಂತು ಕುಣಿದು ಕುಪ್ಪಳಿಸಿತು.

ಗುಂಡ್ಲುಪೇಟೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ತಂಡ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ವೀರ ಯೋಧ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಅವರ ಕುರಿತು ಅಮೋಘ ನೃತ್ಯ ಮಾಡಿ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡರು.

ಹೆಚ್.ಡಿ. ಕೋಟೆಯ ಎಂ.ಎಂ.ಕೆ ಇಂಡಿಪೆಂಡೆಟ್ ಪಿಯು ಕಾಲೇಜು ವಿದ್ಯಾರ್ಥಿಗಳು ಪೌರಾಣಿಕ ʻಬಾರಮ್ಮ ಕಾಳಿ ಬಾರಮ್ಮʼ ಎಂಬ ಕಾಳಿಕಾಂಭ ದೇವಿಯನ್ನು ಸ್ಮರಿಸಿದರು. ವಿರಾಜಪೇಟೆಯ ಸೆಂಟ್ ಎನಿಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಚಿತ್ರದುರ್ಗದ ಕಲ್ಲಿನ ಕೋಟೆಯ ಓನಕೆ ಓಬವ್ವ ಶತ್ರುಗಳನ್ನು ಸಂಹಾರ ಮಾಡುವ ನೃತ್ಯ ಗಮನ ಸೆಳೆಯಿತು.

ಕೃಷ್ಣಮೂರ್ತಿಪುರಂನ ಶಾರದ ನೆಲೆ ಉಚಿತ ವಿದ್ಯಾರ್ಥಿ ನಿಲಯದ ಮಕ್ಕಳು ಜಮ್ಮು ಕಾಶ್ಮೀರದ ಪೆಹಲ್ಗಾಮ್ ಅಮಾಯಕರನ್ನು ಗುಂಡಿಟ್ಟು ಕೊಂದ ಭಯೋತ್ಪಾದಕರನ್ನು ಭಾರತೀಯ ಸೇನೆ ಹುಟ್ಟಡಿಗಿಸಿದ ನೃತ್ಯಕ್ಕೆ ಯುವ ಸಮೂಹ ಸೆಲ್ಯೂಟ್ ಮಾಡಿದರು.

ಮೈಸೂರಿನ ಜೆಎಸ್ಎಸ್ ಸ್ಕೂಲ್ ಆಫ್‌ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಶ್ರೀಕೃಷ್ಣನ ಹಾಡಿನೊಂದಿಗೆ ಕೃಷ್ಣನನ್ನು ಸ್ಮರಿಸಿದರು. ಈ ವೇಳೆ ಕಿರುತರೆ ನಟ ರಾಜೇಶ್ ದ್ರುವ ಅವರ ಪೀಟರ್ ಚಿತ್ರದ ಸುಂದರಿ ಸುಂದರಿ ಹಾಡನ್ನು ಪ್ರದರ್ಶಿಸಲಾಯಿತು.

Previous articleಬಳ್ಳಾರಿ: ಕೋಟ್ಯಂತರ ರೂ. ಜಿಎಸ್‌ಟಿ ವಂಚನೆ ತನಿಖೆ ಚುರುಕು
Next articleBigg Boss: ಪತ್ನಿ-ಅಕ್ಕನ ನಡುವೆ ಕಿರಿಕ್; ಬಿಗ್ ಬಾಸ್ ರಂಜಿತ್ ವಿರುದ್ಧ ದೂರು

LEAVE A REPLY

Please enter your comment!
Please enter your name here