ಮೈಸೂರು: ತಾವೂ ಸಹ ಸಿಎಂ ಸಿದ್ದರಾಮಯ್ಯ ಅವರ ಡಿನ್ನರ್ ಪಾರ್ಟಿಗೆ ಹೋಗಿದ್ದೆ. ಅಲ್ಲಿ ಸಂಪುಟ ಪುನಾರಚನೆಯ ಬಗ್ಗೆ ಚರ್ಚೆ ಆಗಿಲ್ಲ, ಇದೆಲ್ಲ ಮಾಧ್ಯಮದವರ ಸೃಷ್ಟಿ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿನ್ನರ್ ಪಾರ್ಟಿಗೆ ಹೋಗಿದ್ದೆ. ಎಲ್ಲರೂ ಊಟಕ್ಕೆ ಮಾತ್ರ ಸೇರಿದ್ದೆವು. ಯಾವುದೇ ಚರ್ಚೆಯಾಗಿಲ್ಲ. ನವೆಂಬರ್ ಕ್ರಾಂತಿ ಕೂಡ ಮಾಧ್ಯಮದವರ ಸೃಷ್ಟಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆ ಬಂದಿದೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಈ ರೀತಿ ಆಗುತ್ತಿದೆ. 2014ಕ್ಕಿಂತ ಹಿಂದೆ ಈ ರೀತಿ ಇರಲಿಲ್ಲ. ಐಡಿಯಾಲಾಜಿ ವಿಚಾರಕ್ಕೆ ಯಾರನ್ನೂ ಹೆದರಿಸಬಾರದು ಎಂದರು.
ಬಾಲಕಿಯ ಹತ್ಯೆ ಪ್ರಕರಣ: ದಸರಾ ಸಂದರ್ಭದಲ್ಲಿ ಬಲೂನ್ ಮಾರಾಟ ಮಾಡಲು ಬಂದಿದ್ದ ಕುಟುಂಬದ ಜೊತೆ ನಿಲ್ಲುತ್ತೇವೆ. ಪರಿಹಾರ ಕೊಡುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಚರ್ಚೆ ನಡೆದಿದೆ. ಆ ಕುಟುಂಬಕ್ಕೆ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ಇರುವ ಎಲ್ಲ ಸೌಲಭ್ಯವನ್ನು ಕೊಡಿಸುವುದಾಗಿ ಭರವಸೆ ನೀಡಿದರು.


























