ಮೈಸೂರು: ನವೆಂಬರ್ ಕ್ರಾಂತಿಯೂ ಇಲ್ಲ. ನಮ್ಮಲ್ಲಿ ಯಾವ ಬದಲಾವಣೆಯೂ ಇಲ್ಲ. ಅವರು(ಬಿಜೆಪಿ) ಜಪ ಮಾಡಲಿ ಬಿಡಿ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಲೇವಡಿ ಮಾಡಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ನಮ್ಮಲ್ಲಿ ಯಾವ ಬದಲಾವಣೆಗಳೂ ಇಲ್ಲ. ಇನ್ನು, ಸಚಿವ ಪ್ರಿಯಾಂಕ್ ಖರ್ಗೆಗೆ ಬಂದಿರುವ ಬೆದರಿಕೆ ಕುರಿತಂತೆ, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಯಾವ ದೂರವಾಣಿ ಸಂಖ್ಯೆಯಿಂದ ಅಂತಹ ಕರೆ ಬಂದಿದೆ ಎಂಬುದನ್ನು ಪತ್ತೆಹಚ್ಚಿ, ಬೆದರಿಕೆ ಹಾಕಿದವರ ಮೇಲೆ ಕ್ರಮ ಕೈಗೊಳ್ಳಲಿದ್ದೇವೆ. ಅಂತಹ ಕ್ರಮ ಕೈಗೊಳ್ಳದ ಹೊರತು ಇಂತಹ ಪ್ರಕರಣಗಳು ನಿಲ್ಲುವುದಿಲ್ಲ ಎಂದರು.
ಆರ್‌ಎಸ್‌ಎಸ್ ಶಾಖೆಗಳ ನಿರ್ಬಂಧ ಕುರಿತ ಸುದ್ದಿಗಾರರ ಪ್ರಶ್ನೆಗೆ, ಪ್ರಿಯಾಂಕ್ ಖರ್ಗೆ ತಮ್ಮ ಅಭಿಪ್ರಾಯವನ್ನ ಪತ್ರದ ಮೂಲಕ ಹೇಳಿದ್ದಾರೆ. ಸಿಎಂ ಚರ್ಚಿಸಿ ಕ್ರಮ ಕೈಗೊಳ್ಳುತ್ತಾರೆ. ಅವರ ಪತ್ರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನಾನು ಆ ಬಗ್ಗೆ ನಿರ್ಧಾರಗಳನ್ನು ಹೇಳಲು ಸಾಧ್ಯವಿಲ್ಲ. ಸಿಎಂ ಆ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ಸಿಎಂ ರೇಸ್‌ನಿಂದ ಹೊರ ಬಂದಿದ್ದೇನೆ: ಸಚಿವ ಸತೀಶ್ ಜಾರಕಿಹೊಳಿ
ನಾನು ಒಂದು ವರ್ಷದ ಹಿಂದೆಯೇ ಸಿಎಂ ರೇಸ್‌ನಿಂದ ಹೊರ ಬಂದಿದ್ದೇನೆ. ಏಕೆ ಎನ್ನುವುದು ಈಗ ಅಪ್ರಸ್ತುತ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ನಮ್ಮಲ್ಲಿ ಯಾವ ಕ್ರಾಂತಿಗಳೂ ನಡೆಯುತ್ತಿಲ್ಲ. ಸಿಎಂ ಬದಲಾವಣೆ ವಿಚಾರ ಸೇರಿದಂತೆ ಎಲ್ಲವನ್ನೂ ನಿರ್ಧರಿಸುವುದು ನಾನಲ್ಲ. ಬೆಳಗಾವಿಯಲ್ಲಿ ಯಾವ ರಾಜಕೀಯ ಭೂಕಂಪವೂ ಆಗುವುದಿಲ್ಲ. ಏನಾದರೂ ಆದರೆ ಅದು ಬೆಂಗಳೂರಿನಲ್ಲೇ ಆಗಬೇಕು ಅಷ್ಟೇ. ನಾವು ಈಗ ಎಲ್ಲದರಿಂದಲೂ ದೂರ ಇದ್ದೇವೆ. ಸಿಎಂ ಬದಲಾವಣೆ ವಿಚಾರವನ್ನು ನೀವು ಸೂಕ್ತ ವ್ಯಕ್ತಿಗೆ ಕೇಳಬೇಕೆಂದರು. ಕೆಲವರು ಅವರವರ ಅಭಿಮಾನಿಗಳು ಅವರವರ ನಾಯಕ ಸಿಎಂ ಆಗಬೇಕೆಂದು ಹೇಳಿಕೊಳ್ಳುತ್ತಾರೆ, ಅದು ಸಹಜ. ಅದು ಅವರ ಅಭಿಮಾನಿಗಳ ಅಭಿಪ್ರಾಯ ಅಷ್ಟೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.