ಸಂ.ಕ. ಸಮಾಚಾರ ಮೈಸೂರು: ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಮಾತಿನ ಸಮರ ತೀವ್ರಗೊಂಡಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹಣ ವಸೂಲಿಗಾಗಿ ಸಿದ್ದರಾಮಯ್ಯ ತಮ್ಮ ಮಗನನ್ನು ರಾಜಕೀಯಕ್ಕೆ ತಂದಿದ್ದಾರೆ” ಎಂದು ಆರೋಪಿಸಿದರು. “ಸಿಎಂ ಮಗನ ವಸೂಲಿ ಹೇಗಿದೆ ಎಂಬುದು ಅಧಿಕಾರಿಗಳಿಗೆಲ್ಲ ಗೊತ್ತಿದೆ” ಎಂದು ಅವರು ಟೀಕಿಸಿದರು.
ಕುಟುಂಬ ರಾಜಕಾರಣದ ಬಗ್ಗೆ ಟೀಕೆ: ಸಿದ್ದರಾಮಯ್ಯ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಹೇಳಿದ ಕುಮಾರಸ್ವಾಮಿ, “ನಾನು ನನ್ನ ಮಗನನ್ನು ವಸೂಲಿಗಾಗಿ ರಾಜಕೀಯಕ್ಕೆ ತರಲಿಲ್ಲ. ಜನರ ಅಪೇಕ್ಷೆಯಂತೆ ನಿಖಿಲ್ ಕುಮಾರಸ್ವಾಮಿ ರಾಜಕೀಯಕ್ಕೆ ಬಂದಿದ್ದಾರೆ” ಎಂದು ಸ್ಪಷ್ಟಪಡಿಸಿದರು.
1999ರ ಘಟನೆ ನೆನಪಿಸಿದ ಕುಮಾರಸ್ವಾಮಿ: 1999ರ ಚುನಾವಣೆಯ ಬಳಿಕ ನಡೆದ ಘಟನೆಯನ್ನು ನೆನಪಿಸಿಕೊಂಡ ಅವರು, “ಅಂದು ಸಿದ್ದರಾಮಯ್ಯ ಮತ್ತು ಮಹದೇವಪ್ಪ ದೇವೇಗೌಡರ ಮನೆಗೆ ಬಂದು ರಾಜಕೀಯ ಸಾಕು ಎಂದು ಕಣ್ಣೀರಿಟ್ಟಿದ್ದರು. ಆ ಕಣ್ಣೀರಿಗೆ ಬಕೆಟ್ ಇಟ್ಟರೆ ತುಂಬುತ್ತಿತ್ತು” ಎಂದು ಹೇಳಿದರು. ಆ ವೇಳೆ ಎಚ್.ಡಿ. ದೇವೇಗೌಡ ಅವರು ಸಿದ್ದರಾಮಯ್ಯಗೆ ಧೈರ್ಯ ತುಂಬಿ ರಾಜಕೀಯವಾಗಿ ಬೆಂಬಲ ನೀಡಿದರು ಎಂದು ಹೇಳಿದರು.
ಜೆಡಿಎಸ್ ತೊರೆಯುವ ವಿಚಾರ : 2006ರಲ್ಲಿ ಅಹಿಂದ ಹೆಸರಿನಲ್ಲಿ ಸಿದ್ದರಾಮಯ್ಯ ಜೆಡಿಎಸ್‌ಗೆ ‘ಚೂರಿ ಹಾಕಿದರು’ ಎಂದು ಆರೋಪಿಸಿದ ಕುಮಾರಸ್ವಾಮಿ, “ಪಕ್ಷ ಬಿಟ್ಟಾಗ ಅವರ ಜೊತೆ ಹೋಗಿದ್ದವರು ಕೇವಲ 8 ಜನರು ಮಾತ್ರ” ಎಂದು ಟೀಕಿಸಿದರು.
ಕಾಂಗ್ರೆಸ್‌ಗೆ ಸವಾಲು: “ಅಹಿಂದ ಚಾಂಪಿಯನ್ ಎನ್ನುವ ಸಿದ್ದರಾಮಯ್ಯ ಕಾಂಗ್ರೆಸ್ ಹೊರಗೆ ಬಂದು 5–10 ಅಭ್ಯರ್ಥಿಗಳನ್ನು ಗೆಲ್ಲಿಸಿ ತೋರಲಿ” ಎಂದು ಕುಮಾರಸ್ವಾಮಿ ಸವಾಲು ಹಾಕಿದರು. ಅವರು ಇನ್ನಷ್ಟು ಹೇಳಿ, “ಕಾಂಗ್ರೆಸ್‌ಗೆ ಕೊನೆಯ ಹೊಡೆತ ನೀಡೋದು ಸಿದ್ದರಾಮಯ್ಯನೇ” ಎಂದು ಆರೋಪಿಸಿದರು.
ಸಿಎಂ ಸ್ಥಾನ ಕುರಿತು ಹೇಳಿಕೆ: ಸಿಎಂ ಸ್ಥಾನ ಬಿಟ್ಟುಕೊಡುವ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, “ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡುವುದಿಲ್ಲ. ಅವರ ಸ್ವಭಾವ ನನಗೆ ಗೊತ್ತಿದೆ” ಎಂದು ಹೇಳಿದರು. “ಸಿಎಂ ಆಗಲು ದೇವರ ಕೃಪೆ ಅಗತ್ಯ. ಸ್ವಾರ್ಥಕ್ಕಾಗಿ ದೇವರನ್ನು ಬೇಡಿದರೆ ಫಲ ಸಿಗುವುದಿಲ್ಲ” ಎಂದು ಮಾರ್ಮಿಕವಾಗಿ ಹೇಳಿದರು.
ತಮ್ಮ ರಾಜಕೀಯ ಪಯಣ : ತಮ್ಮ ರಾಜಕೀಯ ಪಯಣದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ: “ದೇವರ ಕೃಪೆಯಿಂದ ನಾನು ಎರಡು ಬಾರಿ ಸಿಎಂ ಆಗಿದ್ದೆ” “ಒಮ್ಮೆಲೂ ಸ್ಪಷ್ಟ ಬಹುಮತ ಸಿಗಲಿಲ್ಲ” “ಮುಂದೆಯೂ ದೇವರ ಕೃಪೆ ಇದ್ದರೆ ಸಿಎಂ ಆಗುತ್ತೇನೆ” ಎಂದು ಹೇಳಿದರು.























