ರಸ್ತೆ ಗುಂಡಿ: ಬ್ರ್ಯಾಂಡ್ ಬೆಂಗಳೂರ ಇಮೇಜ್ ಕೆಡಿಸಲು ಸಾಧ್ಯವಿಲ್ಲ- ಸಿಎಂ

0
29

ಮೈಸೂರು: ಒಂದೆರೆಡು ರಸ್ತೆಗಳು ಗುಂಡಿ ಬಿದ್ದುದನ್ನು ಮುಂದಿಟ್ಟುಕೊಂಡು ಕೆಲವರು ರಾಜಕಾರಣ ಮಾಡುತ್ತಿದ್ದಾರೆ. ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡುವುದು ಬೇಡ ಎಂದು ಸಿಎಂ ಸಿದ್ದರಾಮಯ್ಯ ತಾಕೀತು ಮಾಡಿದರು.

ನಗರದಲ್ಲಿನ ಬೌದ್ಧ ಮಹಾ ಸಮ್ಮೇಳನದಲ್ಲಿ ಪಾಲ್ಗೊಳ್ಳಲೆಂದು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಸುದ್ದಿಗಾರರೊಡನೆ ಮಾತನಾಡಿ, ಮಳೆಯಿಂದ ರಸ್ತೆಗಳು ಹಾಳಾಗಿರುವುದು ಸತ್ಯ. ಆದರೆ ಇದನ್ನೇ ನೆಪವಾಗಿರಿಸಿಕೊಂಡು ಟ್ವೀಟ್ ಮಾಡುವುದು ಬೇಡ. ಯಾರು ಏನೇ ಹೇಳಿದರೂ ಬ್ರ್ಯಾಂಡ್ ಬೆಂಗಳೂರಿನ ಇಮೇಜ್ ಕೆಡಿಸಲು ಸಾಧ್ಯವಿಲ್ಲ.

ಗೂಗಲ್ ಕಂಪನಿ ಆಂಧ್ರಕ್ಕೆ ಹೋಗಲು ಅವರದ್ದೇ ಆದ ಕಾರಣಗಳು ಇವೆ. ಅವರು ಹೋಗಲು ಇದೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ನಾವು ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸುವ ಕೆಲಸ ಮಾಡುತ್ತಿದ್ದೇವೆ. ಆದರೆ ಕೆಲವರು ಇದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಇದೇನೇ ಇದ್ದರೂ ಮೂಲ ಸೌಕರ್ಯ ಕುರಿತು ಎಲ್ಲರನ್ನೂ ಕರೆದು ಚರ್ಚಿಸಲಾಗುವುದು. ಸಮಸ್ಯೆ ಸರಿಪಡಿಸಲಾಗುವುದೆಂದರು.

ಸರ್ಕಾರಿ ಜಾಗದಲ್ಲಿ RSS ಚಟುವಟಿಕೆ ನಿಷೇಧ ಮಾಡುವ ನಿರ್ಧಾರಕ್ಕೆ ಬಂದ್ರ ಸಿಎಂ?: ಇದೇ ವೇಳೆ, ದುಷ್ಟ ಶಕ್ತಿಗಳು ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕುತ್ತಿವೆ. ಅದಕ್ಕೆ ಅವರಾಗಲೀ, ನಾವಾಗಲೀ ಜಗ್ಗುವುದಿಲ್ಲ. ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವುದರಲ್ಲಿ ತಪ್ಪೇನಿದೆ ಹೇಳಿ. ತಮಿಳುನಾಡಿನಲ್ಲಿ ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಡೆಸುವುದು ನಿಷೇಧ ಮಾಡಲಾಗಿದೆ. ಅದನ್ನು ಕರ್ನಾಟಕದಲ್ಲಿ ಜಾರಿಗೆ ತನ್ನಿ ಎಂದು ಪ್ರಿಯಾಂಕ್ ಖಗೆ ಹೇಳಿದ್ದಾರೆ.

ಈ ಪತ್ರವನ್ನ ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ತಮಿಳುನಾಡಿನ ಆದೇಶದ ಸಂಪೂರ್ಣ ವರದಿ ತರಿಸಿಕೊಳ್ಳುತ್ತಿದ್ದೇವೆ. ಅದನ್ನು ಗಮನಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೇಳಿದ್ದೇವೆ. ಅದರ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಬಿಜೆಪಿಯವರು ಯಾವಾಗಲೂ ದಮ್ಮಿದ್ದರೇ ಬ್ಯಾನ್ ಮಾಡಿ ಧಮ್ ಇದ್ದರೇ ಬನ್ನಿ ಎಂದು ಕರೆಯುತ್ತಾರೆ. ಕಳೆದ ಚುನಾವಣೆ ಆ ರೀತಿ ಕರೆದಿದ್ದರು. ಅವರ ಸ್ಥಿತಿ ಏನಾಯ್ತು ಗೊತ್ತಲ್ಲ ಎಂದು ಲೇವಡಿ ಮಾಡಿದರು.

ಜಾತಿ ಗಣತಿ ಸಮೀಕ್ಷೆ: ಬೆಂಗಳೂರನ್ನು ಬಿಟ್ಟರೆ ಇನ್ನೆಲ್ಲೂ ಸಮೀಕ್ಷೆಯಲ್ಲಿ ಹಿನ್ನಡೆಯಾಗಿಲ್ಲ. ಹೀಗಾಗಿ ಜಾತಿ ಗಣತಿ ಸಮೀಕ್ಷೆಗೆ ದಿನಾಂಕ ವಿಸ್ತರಣೆ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು. ನಗರದಲ್ಲಿ ಆಟಿಕೆ ಮಾರುವ ಕುಟುಂಬದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ಪ್ರಕರಣ ಕುರಿತ ಪತ್ರಕರ್ತರ ಪ್ರಶ್ನೆಗೆ, ಮೃತ ಬಾಲಕಿ ಕುಟುಂಬಕ್ಕೆ ಪರಿಹಾರ ಕೊಡುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ಅನುದಾನ: ಸಕಾರ ಅನುದಾನ ಕೊಡುವ ವಿಷಯದಲ್ಲಿ ತಾರತಮ್ಯ ಮಾಡುತ್ತಿದೆ ಎಂಬ ಬಿಜೆಪಿ ಆರೋಪ ಕುರಿತು, ಬಿಜೆಪಿ ಜೆಡಿಎಸ್ ಅಧಿಕಾರದಲ್ಲಿದ್ದಾಗ ನಮ್ಮ ಶಾಸಕರಿಗೆ ಏನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಶಾಸಕರಿಗೆ ಕೊಡುವ ಅನುದಾನದಲ್ಲಿ ಬಾರಿ ತಾರತಮ್ಯ ಮಾಡಿದರು. ನಾವು ಅದನ್ನು ಪುನಾರವರ್ತನೆ ಮಾಡುವುದಿಲ್ಲ. ಎಲ್ಲರಿಗೂ ಸಮಾನವಾಗಿ ಅನುದಾನ ಕೊಡುತ್ತಿದ್ದೇವೆ ಎಂದರು.

Previous articleಬೀದರ್‌: 300 ಕೋಟಿ ಬೆಳೆ ಹಾನಿ ಪರಿಹಾರ: ಖಾತೆಗೆ ಹಣ ಯಾವಾಗ? ಇಲ್ಲಿದೆ ಮಾಹಿತಿ
Next articleನವೆಂಬರ್ ಕ್ರಾಂತಿ ಎಂಬುದು ಬಿಜೆಪಿ ಜಪ: ಪರಮೇಶ್ವರ್

LEAVE A REPLY

Please enter your comment!
Please enter your name here