ಮೈಸೂರು: “ರಾಜ್ಯದಲ್ಲಿ ನೇಪಾಳ ಮಾದರಿಯಲ್ಲಿ ಕ್ರಾಂತಿ ಆಗುವುದು ಅನಿವಾರ್ಯ” ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಮೈಸೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗಣಪತಿ ವಿಸರ್ಜನೆ ವೇಳೆ ಸರ್ಕಾರದ ವೈಫಲ್ಯ ಜನರಿಗೆ ಗೋಚರವಾಗಿದೆ. ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಹೀಗೆ ಮುಂದುವರಿದರೆ ಈ ಸರ್ಕಾರ ಐದು ವರ್ಷವೂ ಇರಲ್ಲ. ನೇಪಾಳ ಮಾದರಿಯಲ್ಲಿ ಕ್ರಾಂತಿ ಖಚಿತ” ಎಂದರು.
ಎಫ್‌ಐಆರ್ ಕುರಿತು ಪ್ರತಿಕ್ರಿಯೆ: ಮದ್ದೂರಿನಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಕುರಿತು ಮಾತನಾಡಿದ ಯತ್ನಾಳ, “ಅಕ್ರಮ ಮಸೀದಿಗಳ ಬಗ್ಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ದಾಖಲೆ ಇಲ್ಲದ ಕಟ್ಟಡಗಳನ್ನು ಪರಿಶೀಲಿಸಿ ಅಗತ್ಯವಿದ್ದರೆ ಕೆಡವಬೇಕು. ನನ್ನ ಮೇಲೆ ಎಷ್ಟು ಕೇಸು ಹಾಕಿದರೂ ನಾನು ಹೆದರಲ್ಲ, ಈಗಾಗಲೇ 70 ಕೇಸುಗಳಿವೆ” ಎಂದರು.
ಬಿಜೆಪಿ ಹಾಗೂ ಸರ್ಕಾರದ ವಿರುದ್ಧ ಟೀಕೆ: “ಹಿಂದೆ ಶಿವಮೊಗ್ಗ ಗಲಭೆಯಲ್ಲಿ ಯಡಿಯೂರಪ್ಪ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಂಡಿರಲಿಲ್ಲ. ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳಿಗೆ ಕೊಡುಗೆ ಬಗ್ಗೆ ಪ್ರಶ್ನೆ ಇದೆ. ಕಾಂಗ್ರೆಸ್ ಸರ್ಕಾರವೂ ಹಿಂದೂ ಮತದಾರರನ್ನು ಕಡೆಗಣಿಸುತ್ತಿದೆ” ಎಂದು ಆರೋಪಿಸಿದರು.
2028ಕ್ಕೆ ರಾಜ್ಯದಲ್ಲಿ ಕ್ರಾಂತಿ: “2028ರ ವೇಳೆಗೆ ರಾಜ್ಯದಲ್ಲಿ ಕ್ರಾಂತಿ ಆಗುತ್ತೆ. ಪ್ರತಾಪ್ ಸಿಂಹ, ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಎಲ್ಲರೂ ಸೇರಿ ಬದಲಾವಣೆ ತರುತ್ತೇವೆ. ಬಿಜೆಪಿ ಕುಟುಂಬ ರಾಜಕಾರಣದಿಂದ ಮುಕ್ತವಾಗದಿದ್ದರೆ ನಾವು ನಮ್ಮದೇ ದಾರಿ ಹಿಡಿಯುತ್ತೇವೆ” ಎಂದರು.
ಭಾನು ಮುಸ್ತಾಕ್ ವಿವಾದ: ದಸರಾ ಉದ್ಘಾಟನೆ ಕುರಿತು ಮಾತನಾಡಿದ ಅವರು, “ಚಾಮುಂಡಿ ತಾಯಿಗೆ ಹೂವಿಡುವವರು ಸನಾತನಿಗಳು ಆಗಿರಬೇಕು. ಮೂರ್ತಿ ಪೂಜೆಗೆ ವಿರೋಧಿಸುವವರಿಂದ ದಸರಾ ಉದ್ಘಾಟನೆ ಸರಿಯಲ್ಲ. ಮುಸ್ಲಿಂ ಧರ್ಮಗುರುಗಳು ಇದಕ್ಕೆ ಏನು ಹೇಳುತ್ತಾರೆ? ಸಿದ್ದರಾಮಯ್ಯ ಅವರ ರಾಜಕೀಯ ಅಂತ್ಯ ಚಾಮುಂಡಿ ಬೆಟ್ಟದಿಂದಲೇ ಆಗುತ್ತೆ” ಎಂದು ಹೇಳಿದರು.