ಮೈಸೂರು ದಸರಾ 225: ವಿಶ್ವ ವಿಖ್ಯಾತ ಜಂಬೂಸವಾರಿಗೆ ಮೈಸೂರು ಸಜ್ಜು

0
78

ಮೈಸೂರು ದಸರಾ-2025 ಸಂಪನ್ನಗೊಳ್ಳುವ ಕೊನೆ ದಿನವಾದ ಅಕ್ಟೋಬರ್ 2ರ ಪ್ರಮುಖ ಕಾರ್ಯಕ್ರಮ ಜಂಬೂಸವಾರಿ ಹಾಗೂ ಸಂಜೆಯ ಟಾರ್ಚ್‍ಲೈಟ್ ಪೆರೇಡ್‍ಗೆ ಮೈಸೂರು ಸಜ್ಜಾಗಿದೆ. ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಮಧ್ಯಾಹ್ನ 1ರಿಂದ 1.18ರೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಕಳೆದ ಹಲವಾರು ದಿನಗಳಿಂದ ದಸರೆ ಕಾರಣ ನಗರಕ್ಕೆ ಹೊಸ ಕಳೆ ಬಂದಿದ್ದು, ಸಂಜೆಯಾಗುತ್ತಲೇ ಝಗ್ಗನೆ ಹೊತ್ತಿಕೊಳ್ಳುವ ಬೆಳಕಿನ ಸೌಂದರ್ಯದಲ್ಲಿ ನಗರ ಮಿಂದೇಳುತ್ತಿದೆ.

ಇದರೊಡನೆ ಹಲವು ದಿನ ಅರಮನೆ, ಉತ್ತನಹಳ್ಳಿ ಬಯಲು, ಜಗನ್ಮೋಹನ ಅರಮನೆ ಮೊದಲಾದ ಕಡೆಗಳಲ್ಲಿ ಸತತ ಸಾಂಸ್ಕೃತಿಕ, ಕ್ರೀಡಾ ಹಾಗೂ ಸಾಹಿತ್ಯಕ ಕಾರ್ಯಕ್ರಮಗಳಲ್ಲದೆ, ಆಹಾರ ಪ್ರಿಯರನ್ನು ತಣಿಸುವ ಆಹಾರ ಮೇಳೆಗಳೂ ಯಶಸ್ವಿಯಾಗಿ ನಡೆದಿವೆ. ಕೆಲವೊಂದು ಮೇಳ ಸಂಪನ್ನಗೊಂಡಿದ್ದರೆ ಕೆಲವು ಇನ್ನೂ ಹಲವು ದಿನ ಮುಂದುವರಿಯಲಿವೆ.

ಜಂಬೂ ಸವಾರಿ: ಈ ನಡುವೆ ದಸರೆಗೆ ನಿಜವಾದ ಮೆರುಗು ನೀಡುವುದೇ ಜಂಬೂಸವಾರಿ, ಇದು ಕೇವಲ ಆನೆಯ ಮೇಲೆ ನಾಡದೇವತೆ ಚಾಮುಂಡಿ ವಿಗ್ರಹ ಇರಿಸಿ ಸಾಗುವಂತದಲ್ಲ, ಈ ವೇಳೆ ನಾಡಿನ ವಿವಿಧ ಜಾನಪದ ಮೊದಲಾದ ಕಲೆಗಳನ್ನು ಪ್ರದರ್ಶಿಸುವ ಜಾನಪದ ತಂಡಗಳೂ ಸಾಗಲಿವೆ.

ಈ ಬಾರಿ ಕೊಡಗಿನ ಸಿದ್ದಿಯರಿಂದ ಹಿಡಿದು ಚಾಮರಾಜನಗರದ ಗೊರವರ ಕುಣಿತ, ಉತ್ತರ ಕರ್ನಾಟಕದ ಚಾಂಜ್‍ಪತಾಕ್‍ವರೆಗಿನ ಸುಮಾರು 120 ಜಾನಪದ ತಂಡಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಹಾದುಹೋಗುತ್ತಿವೆ. ಇದೇ ರೀತಿ ಮತ್ತೊಂದು ಆಕರ್ಷಣೆ ಸ್ತಬ್ಧಚಿತ್ರಗಳಾಗಿವೆ. ರಾಜ್ಯದ ಎಲ್ಲ ಜಿಲ್ಲೆಗಳ ವೈಶಿಷ್ಟ್ಯ ಪ್ರದರ್ಶಿಸುವ ಇವುಗಳು ತಮ್ಮ ತಮ್ಮ ಜಿಲ್ಲೆಯ ಶಿಲ್ಪಕಲೆ, ಕರಕುಶಲತೆ, ಕೈಗಾರಿಕೆ ಮೊದಲಾದ ಉಪಯುಕ್ತ ಮಾಹಿತಿ ನೀಡುತ್ತವೆ. ಇವನ್ನು ಈಗಾಗಲೇ ಬಂಡೀಪಾಳ್ಯದ ಎಪಿಎಂಸಿ ಆವರಣದಲ್ಲಿ ನುರಿತ ಕುಶಲ ಕರ್ಮಿಗಳು ಸಿದ್ಧಪಡಿಸುತ್ತಿದ್ದು, ಅ. 2 ರಂದು ರಾಜ್ಯ, ದೇಶ ಅಷ್ಟೇ ಏಕೆ ವಿದೇಶಗಳ ಪ್ರವಾಸಿಗರ ಮನಸೂರೆಗೊಳ್ಳಲು ಸಜ್ಜಾಗಿವೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಶಕ್ತಿ ಯೋಜನೆಯ ಯಶೋಗಾಥೆ, ಬಿಇಎಂಎಲ್‍ನ ಆತ್ಮನಿರ್ಭರ ಭಾರತ ಮುನ್ನಡೆಸುತ್ತಿದೆ ರಕ್ಷಣಾ ಚಲನಶೀಲತೆಯಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕರ್ನಾಟಕದ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ ಮೊದಲಾದವುಗಳಲ್ಲದೆ, ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ, ಮೈಸೂರು ಜಿಲ್ಲೆಯ ಬದನವಾಳು ನೂಲುವ ಪ್ರಾಂತ್ಯಗಳಂತಹ ಕೆಲವನ್ನು ಇಲ್ಲಿ ಸಾಂದರ್ಭಿಕವಾಗಿ ಉದಾಹರಿಸಬಹುದಾಗಿದೆ.

ಈ ರೀತಿ ಒಟ್ಟಾರೆ 58 ಸ್ತಬ್ಧ ಚಿತ್ರ ಸಾಗುತ್ತಿದ್ದು, ಪ್ರಮುಖ ವಿಷಯ ಗಾಂಧೀಜಿಯವರನ್ನು ಆಧರಿಸಿದೆ. ಇನ್ನು, ಅಂದು ಸಂಜೆ ಎಂದಿನಂತೆ ದಸರಾ ಸಂಪನ್ನಗೊಳ್ಳುವ ಕಾರ್ಯಕ್ರಮ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆಯಲಿದೆ ರಾಜ್ಯಪಾಲರು ಇಲ್ಲಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಈ ಬಳಿಕ ವಿವಿಧ ತಂಡಗಳು ಸಾಂಸ್ಕøತಿಕ, ಜಾನಪದ ಕಲಾ ಪ್ರದರ್ಶನ ನೀಡಲಿವೆ. ಬಳಿಕ ಪೊಲೀಸ್ ಪ್ರಶಿಕ್ಷಣಾರ್ಥಿಗಳು ಆಕರ್ಷಕ ಪಂಜಿನ ಕವಾಯತು ನೀಡಲಿದ್ದು, ಇದರೊಡನೆ ಡ್ರೋನ್ ಶೋ ಮೂಲಕ ದಸರೆ ಸಂಪನ್ನಗೊಳ್ಳಲಿದೆ.

ವಿಜಯ ಶುಭಾಶಯಗಳು: ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಜನರಿಗೆ ವಿಜಯದಶಮಿ ಶುಭಾಶಯಗಳನ್ನು ಕೋರಿದ್ದಾರೆ. ‘ನಾಡಿನ ಜನತೆಗೆ ವಿಜಯ ದಶಮಿಯ ಹಾರ್ದಿಕ ಶುಭಾಶಯಗಳು. ಮನುಕುಲಕ್ಕೆ ಕಂಟಕವಾಗಿದ್ದ ಶತ್ರುಗಳನ್ನು ಸಂಹರಿಸಿ, ನೆಮ್ಮದಿಯ ಅಭಯ ನೀಡಿದ ತಾಯಿ ಚಾಮುಂಡೇಶ್ವರಿಯು ಸದಾಕಾಲ ದ್ವೇಷ, ಹಿಂಸೆ, ದುಃಖಗಳೆಂಬ ಕೆಡಕುಗಳಿಂದ ನಿಮ್ಮೆಲ್ಲರನ್ನು ರಕ್ಷಿಸಲಿ ಎಂದು ಪ್ರಾರ್ಥಿಸುತ್ತೇನೆ’.

‘ಅಧರ್ಮದ ವಿರುದ್ಧದ ಜಯವನ್ನು ಸಂಭ್ರಮಿಸುವ ವಿಜಯದಶಮಿ ಎಲ್ಲರೆದೆಯೊಳಗಿನ ಅವಗುಣಗಳನ್ನು ಮೆಟ್ಟಿ ವಿಕಸನದ ಹಾದಿಯಲ್ಲಿ ನಡೆಸಲಿ ಎಂದು ಆಶಿಸುತ್ತೇನೆ. ಮತ್ತೊಮ್ಮೆ ನಾಡಬಂಧುಗಳಿಗೆ ಹಬ್ಬದ ಶುಭಾಶಯಗಳು’ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.

Previous articleಹಬ್ಬದ ಸಂಭ್ರಮದ ‘ಸಿಹಿ’ಗೆ ಕಲಬೆರಕೆಯ ಕರಾಳ ಛಾಯೆ
Next articleಆರ್‌ಎಸ್‌ಎಸ್ ಶತಮಾನೋತ್ಸವ: ಸಂಘ ಸಾಧನೆಗಳ ಬಗ್ಗೆ ಪ್ರಿಯಾಂಕ್ ಖರ್ಗೆ ಟೀಕೆ

LEAVE A REPLY

Please enter your comment!
Please enter your name here