ಮಂಡ್ಯ: ಯಂತ್ರದ ಮೂಲಕ ಭತ್ತ ನಾಟಿ ಮಾಡಿದ ಜಿಲ್ಲಾ ಪಂಚಾಯಿತಿ ಸಿಇಓ

0
51

ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಓ ನಂದಿನಿ ಕೆ.ಆರ್. ಯಾಂತ್ರೀಕೃತ ವಿಧಾನದ ಮೂಲಕ ಭತ್ತ ನಾಟಿ ಮಾಡುವ ಮೂಲಕ ಗಮನಸೆಳೆದರು. ಕಾವೇರಿ ಒಡಲಿನ ಮಂಡ್ಯ ಜಿಲ್ಲೆಯ ಪ್ರಮಖ ಬೆಳೆ ಭತ್ತವಾಗಿದೆ. ಯಾಂತ್ರೀಕೃತ ವಿಧಾನದ ಮೂಲಕ ಭತ್ತದ ನಾಟಿಯನ್ನು ಮಹಿಳೆಯರು ಕೂಡ ಮಾಡಲು ಸಾಧ್ಯ ಎಂದು ಸಂದೇಶ ಸಾರುವ ನಿಟ್ಟಿನಲ್ಲಿ ಸಿಇಓ ನಂದಿನಿ ಕೆ.ಆರ್. ಸ್ವತಃ ಭತ್ತ ನಾಟಿ ಮಾಡಿದರು.

ಜಿಲ್ಲಾ ಪಂಚಾಯತ್, ಮಂಡ್ಯ ಮತ್ತು ಕೃಷಿ ಇಲಾಖೆ ಮಂಡ್ಯ ವತಿಯಿಂದ ಹೊಳಲು ಗ್ರಾಮದ ದಕ್ಷ ಯಂತ್ರ ನಾಟಿ ಸಸಿಮಡಿ ತಯಾರಿಕಾ ಘಟಕದಲ್ಲಿ ಏರ್ಪಡಿಸಲಾಗಿದ್ದ ಯಾಂತ್ರೀಕೃತ ಭತ್ತದ ನಾಟಿ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದ ಅವರು ಯಾಂತ್ರೀಕೃತ ವಿಧಾನದ ಮೂಲಕ ಮಹಿಳೆಯರು ಕೂಡ ಭತ್ತ ನಾಟಿ ಮಾಡಬಹುದು ಎಂಬ ವಿಶ್ವಾಸ ತುಂಬಲು ಸ್ವತಃ ಅವರೇ ನಾಟಿ ಪ್ರಕ್ರಿಯೆಯಲ್ಲಿ ತೊಡಗಿರುವುದಾಗಿ ತಿಳಿಸಿದರು.

ಭತ್ತ ನಾಟಿಗೆ ಯಂತ್ರ ಬಳಸಲು ಮಹಿಳೆಯರಿಗೆ ಸಾಧ್ಯವಿಲ್ಲ, ಅವರಿಂದ ಯಂತ್ರವನ್ನು ನಿರ್ವಹಣೆ ಮಾಡಲು ಅಸಾಧ್ಯ ಎಂಬ ಕಲ್ಪನೆಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಮಹಿಳೆಯರು ಕೂಡ ಯಂತ್ರದ ಮೂಲಕ ಭತ್ತ ನಾಟಿ ಮಾಡಬಹುದು ಹಾಗೂ ಯಂತ್ರವನ್ನು ನಿರ್ವಹಣೆ ಮಾಡಬಹುದು ಎಂದು ತರಬೇತಿಗೆ ಬಂದಿದ್ದ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಭತ್ತ ನಾಟಿಗೆ ಕೃಷಿ ಕೂಲಿಕಾರರು ಸರಿಯಾದ ಸಮಯದಲ್ಲಿ ದೊರೆಯುತ್ತಿಲ್ಲ, ಇದರಿಂದ ಸರಿಯಾದ ಸಮಯದಲ್ಲಿ ನಾಟಿ ಮಾಡಲು ಸಾಧ್ಯವಾಗದೇ ಇಳುವರಿ ಕಡಿಮೆಯಾಗುತ್ತಿದೆ. ಯಾಂತ್ರೀಕೃತ ವಿಧಾನದ ಭತ್ತ ನಾಟಿಯಿಂದ ಭತ್ತ ನಾಟಿಯ ವೆಚ್ಚ ತಗ್ಗಿಸಬಹುದಾಗಿದೆ ಹಾಗೂ ಕಡಿಮೆ ಸಮಯದಲ್ಲಿ ನಾಟಿ ಮಾಡಬಹುದಾಗಿದೆ ಎಂದು ಸಿಇಓ ನಂದಿನಿ ಕೆ.ಆರ್. ತಿಳಿಸಿದರು.

ಕೃಷಿ ಇಲಾಖೆಯ ಸಮನ್ವಯದೊಂದಿಗೆ, ಮಂಡ್ಯ ಜಿಲ್ಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ ನೋಂದಾಯಿತ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಒಂಟಿ ಕಣ್ಣಿನ ಕಬ್ಬಿನ ಸಸಿ ಮಡಿ ತಯಾರಿಸುವುದು ಹಾಗೂ ಯಂತ್ರ ನಾಟಿ ಸಸಿಮಡಿ ತಯಾರಿಸುವ ಕುರಿತಂತೆ ಒಂದು ದಿನದ ತರಬೇತಿಯನ್ನು ಏರ್ಪಡಿಸಲಾಗಿತ್ತು.

ಯಾಂತ್ರೀಕೃತ ವಿಧಾನದ ಭತ್ತ ನಾಟಿಗೆ ಸಸಿಮಡಿಗಳನ್ನು ತಯಾರಿಸುವ ವಿಧಾನದ ಬಗ್ಗೆ ಮಹಿಳಾ ಸ್ವ-ಸಹಾಯ ಸಂಘಗಳಿಗೆ ತರಬೇತಿ ನೀಡಿ, ಅವರಿಂದ ರೈತರಿಗೆ ಉತ್ತಮ ಗುಣಮಟ್ಟದ ಭತ್ತದ ಸಸಿಗಳನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಮತ್ತು ಕೃಷಿ ಇಲಾಖೆ ಕಾರ್ಯಪ್ರವೃತ್ತವಾಗಿದ್ದು, ಈ ನಿಟ್ಟಿನಲ್ಲಿ ತರಬೇತಿ ಏರ್ಪಡಿಸಲಾಗಿತ್ತು ಎಂದು ನಂದಿನಿ ಕೆ.ಆರ್. ಹೇಳಿದರು.

Previous articleಹಾಸನ: ಲಾರಿ ಅಪಘಾತದಲ್ಲಿ 8 ಮಂದಿ ಸಾವು, ಸರ್ಕಾರದಿಂದ ಪರಿಹಾರ ಘೋಷಣೆ
Next articleರಷ್ಯಾದ ಕರಾವಳಿಯಲ್ಲಿ 7.4 ತೀವ್ರತೆಯ ಭೂಕಂಪ – ಸುನಾಮಿ ಆತಂಕ

LEAVE A REPLY

Please enter your comment!
Please enter your name here