ಅಪಘಾತದಂತೆ ತೋರಿಸಿದ ಹತ್ಯೆ: ಮಂಡ್ಯದಲ್ಲಿ ಅರ್ಚಕ ಸಿದ್ದಲಿಂಗಪ್ಪ ಕೊಲೆ ಪ್ರಕರಣ ಬಹಿರಂಗ
ಮಂಡ್ಯ: ಅರ್ಚಕನ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್ ಬೆಳಕಿಗೆ ಬಂದಿದೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನು ಕೊಲೆ ಮಾಡಿಸಲು ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಸಂಚು ರೂಪಿಸಿದ್ದ ಘಟನೆ ಮಂಡ್ಯ ಜಿಲ್ಲೆಯ ಮರಳಗಾಲ ಗ್ರಾಮದ ಬಳಿ ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಮೃತರನ್ನು ಸಿದ್ದಲಿಂಗಪ್ಪ ಎಂದು ಗುರುತಿಸಲಾಗಿದ್ದು, ಅವರು ಸ್ಥಳೀಯ ದೇವಾಲಯದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಶಾಲಿನಿ ಹಾಗೂ ಆಕೆಯ ಪ್ರಿಯಕರ ಹರೀಶ್ ಸೇರಿ ಈ ಕೊಲೆ ನಡೆಸಿರುವ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳು ಇದ್ದರು ಎಂದು ತಿಳಿದುಬಂದಿದೆ.
ಒಂದೂವರೆ ವರ್ಷದಿಂದ ಅಕ್ರಮ ಸಂಬಂಧ: ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಶಾಲಿನಿ ಹಾಗೂ ಅದೇ ಗ್ರಾಮದ ಹರೀಶ್ ನಡುವೆ ಹಲವು ತಿಂಗಳುಗಳಿಂದ ಅಕ್ರಮ ಸಂಬಂಧವಿತ್ತು. ಸುಮಾರು ಒಂದೂವರೆ ವರ್ಷದ ಹಿಂದೆ ಸಿದ್ದಲಿಂಗಪ್ಪ ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಬಳಿಕ ಪತ್ನಿಗೆ ಹಲವಾರು ಬಾರಿ ಬುದ್ಧಿವಾದ ಹೇಳಿ, ಸಂಬಂಧ ಮುರಿಯಲು ಒತ್ತಾಯಿಸಿದ್ದರು.
ಆದರೆ ಈ ವಿಷಯದಿಂದ ಬೇಸತ್ತ ಶಾಲಿನಿ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಮುಗಿಸುವ ಯೋಜನೆ ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಪೂಜೆಗೆ ತೆರಳಿದ್ದ ವೇಳೆ ಸಂಚು ಜಾರಿ: ಮಾ.6ರಂದು ಸಿದ್ದಲಿಂಗಪ್ಪ ಪೂಜೆಯ ಕೆಲಸಕ್ಕಾಗಿ ಮರಳಗಾಲ ಭಾಗಕ್ಕೆ ತೆರಳಿದ್ದರು. ಈ ವೇಳೆ ಶಾಲಿನಿ ತನ್ನ ಪ್ರಿಯಕರ ಹರೀಶ್‌ಗೆ ಮೆಸೇಜ್ ಮೂಲಕ ಮಾಹಿತಿ ನೀಡಿದ್ದಳು. ನಂತರ ಬೈಕ್‌ನಲ್ಲಿ ನಾಲೆ ಏರಿ ಮನೆಗೆ ಮರಳುತ್ತಿದ್ದ ಸಿದ್ದಲಿಂಗಪ್ಪನನ್ನು ಹರೀಶ್ ಹಾಗೂ ಅವನ ಇಬ್ಬರು ಸ್ನೇಹಿತರು ಮಾರ್ಗಮಧ್ಯೆ ಅಡ್ಡಗಟ್ಟಿದರು. ಬಳಿಕ ದೊಣ್ಣೆಯಿಂದ ತಲೆಗೆ ಹೊಡೆದು ಹತ್ಯೆಗೈದಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಅಪಘಾತದಂತೆ ತೋರಿಸಲು ಯತ್ನ: ಹತ್ಯೆಯ ಬಳಿಕ ಆರೋಪಿಗಳು ಮೃತದೇಹವನ್ನು ನಾಲೆಗೆ ತಳ್ಳಿಹಾಕಿ, ಘಟನೆ ಅಪಘಾತದಂತೆ ತೋರಿಸಲು ಯತ್ನಿಸಿದ್ದಾರೆ. ಸಿದ್ದಲಿಂಗಪ್ಪ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಹುಡುಕಾಟದ ವೇಳೆ ಸಿಡಿಎಸ್ ನಾಲೆ ದಡದಲ್ಲಿ ಸಿದ್ದಲಿಂಗಪ್ಪನ ಚಪ್ಪಲಿ ಹಾಗೂ ಬಟ್ಟೆಗಳು ಪತ್ತೆಯಾಗಿದ್ದವು. ನಂತರ ನಾಲೆಯಲ್ಲೇ ಮೃತದೇಹ ಹಾಗೂ ಬೈಕ್ ಪತ್ತೆಯಾಯಿತು.
ಪೊಲೀಸರಿಗೆ ಹುಟ್ಟಿದ ಅನುಮಾನ: ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಚಪ್ಪಲಿ ಸಿಕ್ಕಿದ್ದ ಸ್ಥಳದಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದವು. ಇದರಿಂದ ಪ್ರಕರಣದ ಮೇಲೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಪೊಲೀಸರು ಶಾಲಿನಿ ಹಾಗೂ ಹರೀಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ತೀವ್ರ ವಿಚಾರಣೆಯ ವೇಳೆ ಕೊಲೆ ಸಂಚಿನ ಸಂಪೂರ್ಣ ರಹಸ್ಯ ಬಯಲಾಗಿದೆ. ನಂತರ ಪತ್ನಿ ಶಾಲಿನಿ, ಪ್ರಿಯಕರ ಹರೀಶ್ ಹಾಗೂ ಇತರರನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ಮುಂದಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.























