ಮಂಡ್ಯ (ನಾಗಮಂಗಲ): ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಜಟಕ ಗೇಟ್ ಸಮೀಪ ಗುರುವಾರ ತಡರಾತ್ರಿ ನಡೆದ ಅಕ್ರಮ ಕಲ್ಲುಗಣಿಗಾರಿಕೆ ಕ್ವಾರೆಯ ಭೀಕರ ದುರಂತದಲ್ಲಿ ಟಿಪ್ಪರ್ ಚಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಕ್ರಷರ್‌ನಲ್ಲಿ ಕಲ್ಲು ತುಂಬಿಕೊಂಡು ಸಾಗುತ್ತಿದ್ದ ಟಿಪ್ಪರ್ ವಾಹನವು ನಿಯಂತ್ರಣ ತಪ್ಪಿ ಸುಮಾರು 40 ಅಡಿ ಆಳದ ನೀರು ತುಂಬಿದ್ದ ಗುಂಡಿಗೆ ಬಿದ್ದ ಪರಿಣಾಮ, ಟಿಪ್ಪರ್ ಚಾಲಕ ಲಚ್ಚಿ ಉರ್ಫ್ ಲಕ್ಷ್ಮಣ (38) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಬಸ್ ಅಪಘಾತ ಪ್ರಕರಣ : ಬದುಕುಳಿಯದ ಬಸ್ ಚಾಲಕ
ಮೃತ ಲಚ್ಚಿ ಅವರು ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಅಪಘಾತದ ವೇಳೆ ಕಲ್ಲು ತುಂಬಿದ ವಾಹನದೊಂದಿಗೆ ನೀರಿನೊಳಗೆ ಮುಳುಗಿದ್ದರು. ಮಾಹಿತಿ ಪಡೆದ ಸ್ಥಳೀಯರು ಪೊಲೀಸರಿಗೆ ಸುದ್ದಿ ನೀಡಿದ್ದು, ತಕ್ಷಣವೇ ಬೆಳ್ಳೂರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರ ಸಹಕಾರದಿಂದ ಕ್ರೇನ್ ಬಳಸಿ ಟಿಪ್ಪರ್ ವಾಹನ ಮತ್ತು ಮೃತದೇಹವನ್ನು ಮೇಲಕ್ಕೆತ್ತಲಾಯಿತು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ: Train Fare: ಇಂದಿನಿಂದ ರೈಲು ಪ್ರಯಾಣ ದರ ಏರಿಕೆ
ಈ ಘಟನೆಯು ಅಗತ್ಯ ಅನುಮತಿ ಪಡೆಯದೆ ಅಕ್ರಮವಾಗಿ ನಡೆಸಲಾಗುತ್ತಿದ್ದ ಸ್ಟೋನ್ ಕ್ರಷರ್‌ನಲ್ಲಿ ಸಂಭವಿಸಿದೆ ಎಂಬ ಆರೋಪಗಳು ಕೇಳಿಬಂದಿವೆ. ಅನುಮತಿ ಇಲ್ಲದೆ ನಡೆಯುತ್ತಿರುವ ಕ್ವಾರೆಯಲ್ಲಿ ಸುರಕ್ಷತಾ ಕ್ರಮಗಳ ಕೊರತೆಯೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಘಟನೆಯ ಕುರಿತು ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ರಮ ಕಲ್ಲುಗಣಿಗಾರಿಕೆ, ನಿರ್ಲಕ್ಷ್ಯ ಹಾಗೂ ಸುರಕ್ಷತಾ ಲೋಪಗಳ ಕುರಿತಂತೆ ತನಿಖೆ ಮುಂದುವರಿದಿದೆ. ಈ ದುರಂತವು ಮತ್ತೆ ಅಕ್ರಮ ಕ್ವಾರಿಗಳ ಅಪಾಯ ಹಾಗೂ ಕಾರ್ಮಿಕರ ಜೀವಕ್ಕೆ ಇರುವ ಭೀತಿಯನ್ನು ಎತ್ತಿಹಿಡಿದಿದೆ.























