ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಈ ಪ್ರಕರಣ ರಾಜಕೀಯ ರೂಪ ಪಡೆದಿದ್ದು, ಮಂಗಳವಾರ ಮದ್ದೂರು ಪಟ್ಟಣ ಬಂದ್‌ಗೆ ಕರೆ ನೀಡಲಾಗಿದೆ.
ಭಾನುವಾರ ರಾತ್ರಿ ಭುಗಿಲೆದ್ದ ಗಲಭೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದಾರೆ. “ಮದ್ದೂರು ಪಟ್ಟಣದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ” ಎಂದು ಜಿ.ಪರಮೇಶ್ವರ ಹೇಳಿದರು.
ಆಗಿದ್ದೇನು?: ಮದ್ದೂರು ಪಟ್ಟಣದ ಸಿದ್ಧಾರ್ಥ ನಗರದ 5ನೇ ಕ್ರಾಸ್‌ನಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ವೇಳೆ, ಮೆರವಣಿಗೆಯಲ್ಲಿದ್ದ ಕೆಲವು ಕಿಡಿಗೇಡಿಗಳು ತಿಂಗಳ ಹಿಂದಷ್ಟೇ ಉದ್ಘಾಟನೆಯಾಗಿದ್ದ ಮಸೀದಿ ಮೇಲೆ ಕಲ್ಲು ಎಸೆದಿದ್ದಾರೆ.
ನಂತರ, ಎರಡು ಕೋಮಿನವರ ನಡುವೆ ಮಾತಿನ ಚಕಮಕಿಯೊಂದಿಗೆ ಕಲ್ಲು ತೂರಾಟ ಆರಂಭವಾಯಿತು. ಕೆಲ ಹೊತ್ತಿನಲ್ಲೇ ಇದು ರಾಜಕೀಯ ತಿರುವು ಪಡೆದುಕೊಂಡಿದೆ. ವಿವಿಧ ಸಂಘಟನೆಗಳ ಕಾರ್ಯಕರ್ತರು ಕೂಡ ಅಲ್ಲಿ ಜಮಾಯಿಸಿದ್ದಾರೆ.
ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಜತೆಗೆ ಜಿಲ್ಲೆಯ ಇತರ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಕರೆಸಿಕೊಂಡು ಬಂದೋಬಸ್ತ್ ಏರ್ಪಡಿಸಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಹತೋಟಿಗೆ ಬಂದಿದ್ದರೂ, ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ ಮತ್ತು ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಇ. ತಿಮ್ಮಯ್ಯ, ಎಸ್.ಇ. ಗಂಗಾಧರಸ್ವಾಮಿ ಸ್ಥಳಕ್ಕೆ ಆಗಮಿಸಿ, ಎರಡು ಸಮುದಾಯದವರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ವಿಜಯೇಂದ್ರ ಪೋಸ್ಟ್: ಮದ್ದೂರು ಗಲಭೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ‘ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟ ಘಟನೆಯು ಕರ್ನಾಟಕ ಸರ್ಕಾರದ ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಶಾಂತಿಯುತ ಮೆರವಣಿಗೆಯಲ್ಲಿ ಭಕ್ತರು ಮತ್ತು ಪೊಲೀಸರ ಮೇಲೆ ದಾಳಿ ನಡೆದಿದೆ. ಆದರೆ, ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಹಿಂಸಾಚಾರದ ವಿರುದ್ಧ ಪ್ರತಿಭಟಿಸುತ್ತಿದ್ದ ಹಿಂದೂಗಳ ಮೇಲೆ ಕಾಂಗ್ರೆಸ್ ಸರ್ಕಾರ ಲಾಠಿ ಚಾರ್ಜ್ ಮಾಡಿದೆ’ ಎಂದು ಆರೋಪಿಸಿದ್ದಾರೆ.
‘ಹಿಂದೂಗಳು ತಮ್ಮ ಹಬ್ಬಗಳನ್ನು ಭಯವಿಲ್ಲದೆ ಆಚರಿಸುವ ಹಕ್ಕನ್ನು ಹೊಂದಿದ್ದಾರೆ. ಕಾಂಗ್ರೆಸ್‌ನ ಓಲೈಕೆ ರಾಜಕಾರಣವು ಸಮಾಜ ವಿರೋಧಿ ಶಕ್ತಿಗಳಿಗೆ ಪ್ರೋತ್ಸಾಹ ನೀಡಿದೆ. ಕರ್ನಾಟಕಕ್ಕೆ ಭದ್ರತೆ, ನ್ಯಾಯ ಮತ್ತು ಪೊಲೀಸರಲ್ಲಿ ನಂಬಿಕೆ ಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಪರಮೇಶ್ವರ ಅವರು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವರನ್ನು ರಕ್ಷಿಸಬಾರದು. ಹಿಂದೂ ಭಾವನೆಗಳ ಮೇಲಿನ ಈ ದಾಳಿಯನ್ನು ಕರ್ನಾಟಕ ಸಹಿಸುವುದಿಲ್ಲ’ ಎಂದು ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಪ್ರತಿಕ್ರಿಯೆ: ಮದ್ದೂರು ಘಟನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಪೋಸ್ಟ್ ಹಾಕಿದ್ದು, “ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆಯ ವೇಳೆ ಕಲ್ಲು ತೂರಾಟ ನಡೆದಿರುವುದು ವಿಷಾದನೀಯ. ಈ ಬಗ್ಗೆ ಸಮರ್ಪಕ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದ್ದು, ಇನ್ನು ಮುಂದೆ ಇಂತಹ ದುರ್ವತನೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲು ತಿಳಿಸಲಾಗಿದೆ’ ಎಂದು ಹೇಳಿದ್ದಾರೆ.
‘ಸಾರ್ವಜನಿಕರು ಈ ದಿಶೆಯಲ್ಲಿ ಸಹಕರಿಸಬೇಕು ಹಾಗೂ ಇಂತಹ ಯಾವುದೇ ರೀತಿಯ ಅಹಿತಕರ ಘಟನೆಗೆ ಎಡೆ ಮಾಡಿಕೊಡಬಾರದು ಎಂದು ಕೋರಿಕೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆಯ ವೇಳೆ ಕಲ್ಲು ತೂರಾಟ ನಡೆದಿರುವುದು ವಿಷಾದನೀಯ. ಈ ಬಗ್ಗೆ ಸಮರ್ಪಕ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದ್ದು, ಇನ್ನು ಮುಂದೆ ಇಂತಹ ದುರ್ವತ್ರನೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲು ತಿಳಿಸಲಾಗಿದೆ. ಸಾರ್ವಜನಿಕರು ಈ ದಿಶೆಯಲ್ಲಿ ಸಹಕರಿಸಬೇಕು ಹಾಗೂ ಇಂತಹ ಯಾವುದೇ ರೀತಿಯ ಅಹಿತಕರ ಘಟನೆಗೆ ಎಡೆ ಮಾಡಿಕೊಡಬಾರದು ಎಂದು ಕೋರಿಕೆ’ ಎಂದು ಮನವಿ ಮಾಡಿದ್ದಾರೆ.