ಕೊಪ್ಪಳ ಜಿಲ್ಲಾಡಳಿತ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ. ಗುಣಮಟ್ಟದ ಸೂರ್ಯಕಾಂತಿಯನ್ನು ಖರೀದಿ ಮಾಡಲಿದೆ. ರೈತರ ನೋಂದಣಿ ಪ್ರಾರಂಭವಾಗಿದ್ದು, ಖರೀದಿ ಕೇಂದ್ರವನ್ನು ತೆರೆಯಲಾಗಿದೆ.
ಪ್ರತಿ ಕ್ವಿಂಟಾಲ್‌ಗೆ ರೂ.7721 ರಂತೆ ಗರಿಷ್ಠ 15,650 ಮೆಟ್ರಿಕ್ ಟನ್ ಎಫ್.ಎ.ಕ್ಯೂ. ಗುಣಮಟ್ಟದ ಸೂರ್ಯಕಾಂತಿಯನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಕೊಪ್ಪಳ ಜಿಲ್ಲೆಯ ರೈತರಿಂದ ಖರೀದಿಸುವ ಕುರಿತು ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಖರೀದಿ ಕೇಂದ್ರಗಳು: ಖರೀದಿ ಕೇಂದ್ರಗಳಾದ ಅಳವಂಡಿಯ ಕೆಒಎಫ್ ಅಡಿಯಲ್ಲಿ ಒಜಿಸಿಎಸ್ ಅಳವಂಡಿ, ಕುಕನೂರಿನ ಕೆಒಎಫ್ ಅಡಿಯಲ್ಲಿ ಒಜಿಸಿಎಸ್ ಮಂಡಲಗೇರಿ, ಯಲಬುರ್ಗಾದ ಕೆಒಎಫ್ ಅಡಿಯಲ್ಲಿ ಒಜಿಸಿಎಸ್ ಬೇವೂರು ಹಾಗೂ ನಾಗನಕಲ್‌ನ ಕೆಒಎಫ್ ಅಡಿಯಲ್ಲಿ ಒಜಿಸಿಎಸ್ ನಾಗನಕಲ್‌ನ ನೋಂದಣಿ ಕೇಂದ್ರದಲ್ಲಿ ರೈತರು ನೋಂದಣಿ ಮಾಡಿಕೊಳ್ಳಬಹುದು.
ಖರೀದಿ ಕೇಂದ್ರಗಳ ವ್ಯವಸ್ಥಿತ ನಿರ್ವಹಣೆಗೆ ಕೊಪ್ಪಳ ತಾಲ್ಲೂಕಿನ ಅಳವಂಡಿ ಖರೀದಿ ಕೇಂದ್ರದ ನೋಡಲ್ ಅಧಿಕಾರಿಗಳಾಗಿ ಕೊಪ್ಪಳ ಎಪಿಎಂಸಿ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ (902224089), ಕುಕನೂರು ಹಾಗೂ ಯಲಬುರ್ಗಾ ತಾಲ್ಲೂಕಿನ ಮಂಡಲಗೇರಿ ಹಾಗೂ ಬೇವೂರು ಖರೀದಿ ಕೇಂದ್ರಗಳ ನೋಡಲ್ ಅಧಿಕಾರಿಗಳಾಗಿ ಯಲಬುರ್ಗಾ ಎಪಿಎಂಸಿಯ ಕಾರ್ಯದರ್ಶಿ ಗುರುಪ್ರಸಾದ ಗುಡಿ (9972054874), ಕಾರಟಗಿ ತಾಲ್ಲೂಕಿನ ನಾಗನಕಲ್ ಖರೀದಿ ಕೇಂದ್ರದ ನೋಡಲ್ ಅಧಿಕಾರಿಗಳಾಗಿ ಕಾರಟಗಿ ಎಪಿಎಂಸಿಯ ಸಹಾಯಕ ಕಾರ್ಯದರ್ಶಿ ಹರೀಶ ಪತ್ತಾರ (9060893320) ನಿಯೋಜಿಸಲಾಗಿದೆ.
ಪ್ರತಿ ಎಕರೆಗೆ 4 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್‌ನಂತೆ ಸೂರ್ಯಕಾಂತಿ ಉತ್ಪನ್ನವನ್ನು ಖರೀದಿಸಲಾಗುತ್ತದೆ. ಎಫ್.ಎ.ಕ್ಯೂ. ಗುಣಮಟ್ಟದ ಸೂರ್ಯಕಾಂತಿಯನ್ನು ಮಾತ್ರ ಖರೀದಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಎಣ್ಣೆ ಬೀಜ ಬೇಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ ರಾಯಚೂರು, ವಿಭಾಗೀಯ ಕಛೇರಿ, ಕೊಪ್ಪಳ (9591812142) ಇವರನ್ನು ಸಂಪರ್ಕಿಸಬಹುದು.
ಹೆಸರು ಕಾಳು ಖರೀದಿ: 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್‌ಗೆ ರೂ. 8,768ರಂತೆ ಗರಿಷ್ಠ 38,000 ಮೆಟ್ರಿಕ್ ಟನ್ ಎಫ್.ಎ.ಕ್ಯೂ. ಗುಣಮಟ್ಟದ ಹೆಸರುಕಾಳನ್ನು ಖರೀದಿ ಮಾಡಲಾಗುತ್ತದೆ.
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಕೊಪ್ಪಳ ಜಿಲ್ಲೆಯ ರೈತರಿಂದ ಖರೀದಿಸುವ ಸಲುವಾಗಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೆಸರುಕಾಳು ಖರೀದಿ ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ.
ಖರೀದಿ ಕೇಂದ್ರಗಳಾದ ಕುಕನೂರಿನ ಪಿಎಸಿಎಸ್ ಕುಕನೂರು, ಯಲಬುರ್ಗಾದ ಟಿಎಪಿಸಿಎಂಎಸ್ ಯಲಬುರ್ಗಾ, ಬನ್ನಿಕೊಪ್ಪದ ಪಿಎಸಿಎಸ್ ಬನ್ನಿಕೊಪ್ಪ, ಚಿಕ್ಕೇನಕೊಪ್ಪದ ಪಿಎಸಿಎಸ್ ಚಿಕ್ಕೇನಕೊಪ್ಪ, ತೊಂಡಿಹಾಳನ ಪಿಎಸಿಎಸ್ ತೊಂಡಿಹಾಳ, ಮುಧೋಳನ ಪಿಎಸಿಎಸ್ ಮುಧೋಳ, ಮಂಡಲಗೇರಿಯ ಎಫ್‌ಪಿಒ ಎರೆಯ ದೊರೆ, ತಾವರಗೇರಾದ ಪಿಎಸಿಎಸ್ ಮೇಣೆದಾಳ, ಹನುಮಸಾಗರದ ಪಿಎಸಿಎಸ್ ಹನುಮಸಾಗರ, ಹಿರೇಸಿಂದೋಗಿಯ ಪಿಎಸಿಎಸ್ ಹಿರೇಸಿಂದೋಗಿ, ಮುದ್ದೇಬಳ್ಳಿಯ ಪಿಎಸಿಎಸ್ ಮುದ್ದೇಬಳ್ಳಿ, ಕವಲೂರಿನ ಪಿಎಸಿಎಸ್ ಕವಲೂರಿನ ಏಜೆನ್ಸಿ ಅಥವಾ ನೋಂದಣಿ ಕೇಂದ್ರಗಳಲ್ಲಿ ರೈತರು ನೋಂದಣಿ ಮಾಡಿಕೊಳ್ಳಬಹುದು.
ಪ್ರತಿ ಎಕರೆಗೆ 3 ಕ್ವಿಂಟಾಲ್ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಹೆಸರುಕಾಳು ಉತ್ಪನ್ನವನ್ನು ಖರೀದಿಸಲಾಗುತ್ತದೆ. ಎಫ್.ಎ.ಕ್ಯೂ. ಗುಣಮಟ್ಟದ ಹೆಸರುಕಾಳನ್ನು ಮಾತ್ರ ಖರೀದಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಶಾಖಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಕೊಪ್ಪಳ (08539-230040) ಸಂಪರ್ಕಿಸಬಹುದು.