8 ತಿಂಗಳ ಹಿಂದಷ್ಟೆ ಇಂಗ್ಲೆಂಡ್ ಕನ್ಯೆಯನ್ನು ವರಿಸಿದ್ದ ಮುರುಳಿ ಇನ್ನಿಲ್ಲ

0
3

ಕೊಪ್ಪಳ: ಇಂಗ್ಲೆಂಡ್‌ನ ಹುಡುಗಿಯೊಬ್ಬಳನ್ನು ಪ್ರೀತಿಸಿ ಎಂಟು ತಿಂಗಳ ಹಿಂದೆ ಮದುವೆಯಾದ ಸೃಜನಶೀಲ ಯುವಕನೊಬ್ಬ ಆಕಸ್ಮಿಕ ಸಾವನ್ನಪ್ಪಿರುವ ಘಟನೆ ತಲ್ಲಣಿಸಿದೆ.

ಮುರಳಿ ಸೋಮವಾರ ಬೆಳಗಿನ ಜಾವ ಮೃತಪಟ್ಟಿದ್ದು, ಕೇವಲ 39 ವರ್ಷ ವಯಸ್ಸಾಗಿತ್ತು. ಸಣಾಪುರದಿಂದ ಮೂರು-ನಾಲ್ಕು ಕಿಲೋಮೀಟರ್ ಅಂತರದ ಬಸಾಪುರದಲ್ಲಿ ಗೆಸ್ಟ್‌ಹೌಸ್ ಮಾಡಿಕೊಂಡು ಉಪ ಜೀವನ ಮಾಡುತ್ತಿದ್ದ ಇವರು ಪ್ರವಾಸಿ ಮಾರ್ಗದರ್ಶಕ, ಚಿತ್ರ ನಿರ್ದೇಶಕನಾಗಿದ್ದ. ತನ್ನ ಕ್ಯಾಮೆರಾದಲ್ಲಿ ಹಂಪಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು ಎಂಬ ತುಡಿತ ಹೊಂದಿದ್ದ.

ಮುರುಳಿ ಲೊಟ್ಟಿ ಮೇರಿ ಫಿಂಕ್ಲರ್ ಅವರನ್ನು ಲಗ್ನವಾದ ನಂತರವೂ ದೀರ್ಘಕಾಲದ ಹೊಟ್ಟೆ ನೋವು ಆತನನ್ನು ಬಳಸಿತು. ಆಗಾಗ ಸ್ಥಳೀಯ ವೈದ್ಯರ ಬಳಿ ತಾತ್ಕಾಲಿಕ ಚಿಕಿತ್ಸೆ ಪಡೆದು, ಮಾತ್ರೆ ಬಳಸುತ್ತಿದ್ದ. ಆದರೆ ಆರೋಗ್ಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ತಪಾಸಣೆ ಮಾಡಿರಲಿಲ್ಲ ಎಂದು ಸ್ನೇಹಿತರು ತಿಳಿಸಿದ್ದಾರೆ.

ಮೂರು ತಿಂಗಳ ಹಿಂದೆ ಹೊಟ್ಟೆನೋವು ಉಲ್ಬಣಗೊಂಡಾಗ ಬೆಂಗಳೂರಿಗೆ ತೆರಳಿ ಚಿಕಿತ್ಸೆಗೆ ತಜ್ಞ ವೈದ್ಯರ ಬಳಿಗೆ ಚಿಕಿತ್ಸೆಗೆ ಹೋಗಿದ್ದ. ಯುವಕನ ಹೊಟ್ಟೆಯಲ್ಲಿ ಅಲ್ಸರ್ ಬೆಳೆದು, ಗಡ್ಡೆಯಾಗಿ ಅದು ಕ್ಯಾನ್ಸರ್ ರೂಪಕ್ಕೆ ತಿರುಗಿದೆ ಎಂದು ವೈದ್ಯರು ಕೈ ಚೆಲ್ಲಿದರು ಎಂದು ಗೊತ್ತಾಗಿದೆ.

ವಿಧಿಯಾಟ: ಸಿನಿಮಾ ಕ್ಷೇತ್ರದಲ್ಲಿ ಕಥೆ ಬರೆಯುವ ದೂರದ ಇಂಗ್ಲೆಂಡಿನ ಮೇರಿ ಫಿಂಕ್ಲರ್ ಆಕಸ್ಮಿಕ ಭೇಟಿ ಸ್ನೇಹಕ್ಕೆ ತಿರುಗಿತ್ತು. ಬಳಿಕ ಪ್ರೇಮಾಂಕುರವಾಗಿ 2025ರ ಮೇ 9ರಂದು ಬಸಾಪುರದ ಗೆಸ್ಟ್ ಹೌಸ್‌ನಲ್ಲಿ ಅದ್ದೂರಿಯಾಗಿ ಹಿಂದು ಸಂಪ್ರದಾಯದಂತೆ ವರಿಸಿದ್ದ. ಶ್ರೀನಗರ ಕಿಟ್ಟಿ-ಮೋಹಕ ತಾರೆ ರಮ್ಯಾ ನಟಿಸಿರುವ ‘ಸಂಜು ವೆಡ್ಸ್ ಗೀತಾ’ ಚಿತ್ರದ ಮಾದರಿಯಲ್ಲಿ, ತಮ್ಮ ಮದುವೆಯನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವ ಉದ್ದೇಶಕ್ಕೆ ಮುರುಳಿ `ಇಂಡಿಯಾ ವೆಡ್ ಲಂಡನ್’ ಎಂಬ ಕಿರು ಚಿತ್ರವನ್ನು ತಯಾರಿಸಿದ್ದ.

ವಿವಾಹಕ್ಕೂ ಮುನ್ನ ಮುರುಳಿ ಮತ್ತು ಮೇರಿ ಫಿಂಕ್ಲರ್ ಸೇರಿ `ಡ್ರೀಮ್ ಸ್ಪೇಸ್’ ಎನ್ನುವ ಕಿರುಚಿತ್ರ ತೆಗೆದಿದ್ದರು. ಇದಕ್ಕೆ ಮೂರು ಪ್ರಶಸ್ತಿ ಸಿಕ್ಕಿದ್ದವು. ಆದರೆ ವಿವಾಹ ಬಂಧನಕ್ಕೆ ಒಳಗಾಗಿ ಕೇವಲ ಎಂಟು ತಿಂಗಳಲ್ಲಿ ಮುರಳಿಯ ಬದುಕಿನ ಪಯಣ ಮುಗಿದ್ದು, ದುರಂತವೇ ಸರಿ.

Previous articleವೃದ್ಧ ದಂಪತಿ ಅನುಮಾನಸ್ಪದ ಸಾವು