ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಮುಂಜಾನೆ ಭಾರೀ ಸಂಚಲನ ಮೂಡಿಸುವಂತಹ ಲೋಕಾಯುಕ್ತ ದಾಳಿ ನಡೆದಿದೆ. ಕೊಪ್ಪಳ ನಗರಸಭೆ ಕಚೇರಿ ಸೇರಿ ಒಟ್ಟು ಐದು ಕಡೆಗಳಲ್ಲಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಕೊಪ್ಪಳ ನಗರಸಭೆ ಕಚೇರಿ ಸೇರದಂತೆ ನಗರಸಭೆ ಜೂನಿಯರ್ ಎಂಜಿನಿಯರ್ (ಜೆಇ) ಸೋಮಲಿಂಗಪ್ಪ ಅವರ ಮನೆ. ಕಂದಾಯ ನಿರೀಕ್ಷಕ ಉಜ್ವಲ್ ಅವರ ಮನೆ. ಗುತ್ತಿಗೆದಾರ ಶಕೀಲ್ ಪಟೇಲ್ (ನಗರಸಭೆ ಅಧ್ಯಕ್ಷರ ಸಹೋದರ) ಅವರ ಮನೆ. ಗುತ್ತಿಗೆದಾರ ಪ್ರವೀಣ ಕಂದಾರಿ ಅವರ ಮನೆ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ
ದಾಳಿಯ ಹಿನ್ನೆಲೆ: 2023-24ನೇ ಸಾಲಿನ ನಗರಸಭೆ ಅನುದಾನದಲ್ಲಿ 10 ಕೋಟಿ ರೂಪಾಯಿಗೂ ಹೆಚ್ಚು ದುರ್ಬಳಕೆ ನಡೆದಿರುವುದು ಎಂಬ ಆರೋಪ ಕೇಳಿಬಂದಿತ್ತು. ಒಟ್ಟು 336 ಕಾಮಗಾರಿಗಳಲ್ಲಿ ಅರ್ಧಂಬರ್ಧ ಮಾತ್ರ ಕೆಲಸ ನಡೆಯಿತೆಂಬ ಗಂಭೀರ ಆರೋಪ ಹೊರಬಿದ್ದಿತ್ತು. ಕೆಲವು ಕಡೆಗಳಲ್ಲಿ ಕಾಮಗಾರಿ ನಡೆದಿಲ್ಲದಿದ್ದರೂ ಬಿಲ್‌ಗಳನ್ನು ತಯಾರಿಸಿ ಹಣ ಬಿಡುಗಡೆ ಮಾಡಲಾಗಿದೆ ಎಂಬ ದೂರುಗಳು ದಾಖಲಾಗಿದ್ದವು. ದಾಳಿ ನಡೆಸಿದ ಅಧಿಕಾರಿಗಳು ಲೋಕಾಯುಕ್ತ ಅಧಿಕಾರಿಗಳು ದೂರುಗಳ ಆಧಾರದಲ್ಲಿ ಐದು ತಂಡಗಳನ್ನು ರಚಿಸಿ ದಾಳಿ ನಡೆಸಿದ್ದಾರೆ.
ಡಿವೈಎಸ್ಪಿ ವಸಂತಕುಮಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಇನ್ಸ್‌ಪೆಕ್ಟರ್‌ಗಳಾದ ವಿಜಯಕುಮಾರ್, ಚಂದ್ರಪ್ಪ, ನಾಗರತ್ನ, ಶೈಲಾ, ಅಮರೇಶ ಹುಬ್ಬಳ್ಳಿ ಸೇರಿ ಹಲವು ಸಿಬ್ಬಂದಿ ದಾಳಿಯಲ್ಲಿ ಭಾಗಿಯಾಗಿದ್ದಾರೆ.
ನಗರಸಭೆಯ ಅನುದಾನದಲ್ಲಿ ನಡೆದಿರಬಹುದಾದ ಅಕ್ರಮ ಖರ್ಚು, ದಾಖಲೆಗಳಲ್ಲಿ ತಾರತಮ್ಯ ಮತ್ತು ಭ್ರಷ್ಟಾಚಾರದ ಮೂಲಗಳನ್ನು ಪತ್ತೆಹಚ್ಚುವುದು. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಹಣಕಾಸು ವ್ಯವಹಾರ, ಆಸ್ತಿಪಾಸ್ತಿ ಮತ್ತು ದಾಖಲೆಗಳ ಪರಿಶೀಲನೆ. ದಾಳಿಯ ನಂತರ ದಾಖಲೆಗಳ ಪರಿಶೀಲನೆ ಮತ್ತು ಪ್ರಾಥಮಿಕ ವರದಿ ಸಿದ್ಧವಾದ ಮೇಲೆ ಸಂಬಂಧಪಟ್ಟವರ ವಿರುದ್ಧ ಅಕ್ರಮದ ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಇದು ಇನ್ನೂ ತನಿಖೆಯ ಹಂತದಲ್ಲಿರುವುದರಿಂದ, ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರಗಳು ಬಹಿರಂಗವಾಗುವ ಸಾಧ್ಯತೆ ಇದೆ.