ಕೊಪ್ಪಳ: ಮಗನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮರುದಿನವೇ ತಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ವರಣಖೇಡ ಗ್ರಾಮದಲ್ಲಿ ನಡೆದಿದೆ. ಆಸ್ತಿ ವಿಚಾರದಲ್ಲಿ ಮಗನೇ ತಂದೆಯನ್ನು ಕೊಲೆ ಮಾಡಿದ್ದಾನೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಪ್ರಕರಣ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದೆ.
ಮೃತರನ್ನು ವೆಂಕೋಬಾ ಹಂಚಿನಾಳ (50) ಎಂದು ಗುರುತಿಸಲಾಗಿದೆ. ಸೋಮವಾರ (ಜ.26) ಸಂಜೆ ತಮ್ಮ ಜಮೀನಿನಲ್ಲಿ ವೆಂಕೋಬಾ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಘಟನೆಗೆ ಎರಡು ದಿನಗಳ ಹಿಂದಷ್ಟೇ ವೆಂಕೋಬಾ ತಮ್ಮ ಮಗನ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಿದ್ದು, ಆಸ್ತಿ ವಿಚಾರದಲ್ಲಿ ಮಗ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಹಿರಿಯರ ಬದುಕಿಗೆ ‘ಸ್ಪಂದನ’: ಅರಿವು ಕೇಂದ್ರದಿಂದ ಜೀವನೋತ್ಸಾಹ
ದೂರು ದಾಖಲಾದ ಬಳಿಕವೇ ವೆಂಕೋಬಾ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸಂಬಂಧಿಕರು ಮತ್ತು ಗ್ರಾಮಸ್ಥರು ಆಸ್ತಿಗಾಗಿ ಮಗನೇ ತಂದೆಯನ್ನು ಕೊಲೆ ಮಾಡಿದ್ದಾನೆ ಎಂದು ಶಂಕಿಸಿದ್ದಾರೆ.
ಈ ಸಂಬಂಧ ಮೃತ ವೆಂಕೋಬಾ ಅವರ ತಾಯಿ ಸೂರಮ್ಮ ಅವರು ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ, ಹತ್ತು ಎಕರೆ ಆಸ್ತಿ ವಿಚಾರವಾಗಿ ವೆಂಕೋಬಾ ಹಾಗೂ ಆತನ ಮಗನ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಉಲ್ಲೇಖಿಸಿದ್ದಾರೆ. ಇದೇ ಕಾರಣಕ್ಕೆ ಮಗನೇ ತಂದೆಗೆ ವಿಷ ಹಾಕಿ ಕೊಲೆ ಮಾಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಗ್ರಾಮ ಪಂಚಾಯಿತಿಗಳಿಗೆ ಗಾಂಧೀಜಿ ಹೆಸರು: ಸರ್ಕಾರದ ನಿರ್ಧಾರ
ಅಲ್ಲದೆ, ಈ ಪ್ರಕರಣದಲ್ಲಿ ಸೊಸೆ, ಮೊಮ್ಮಗ ಹಾಗೂ ಮೊಮ್ಮಗನ ಹೆಂಡತಿ ಕೂಡ ಶಾಮೀಲರಾಗಿರುವ ಶಂಕೆ ಇದೆ ಎಂದು ಸೂರಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕುಟುಂಬದೊಳಗಿನ ಆಸ್ತಿ ವಿವಾದವೇ ಈ ಸಾವಿನ ಹಿಂದಿನ ಪ್ರಮುಖ ಕಾರಣವಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿ ಕನಕಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮರಣೋತ್ತರ ವರದಿ ಬಂದ ನಂತರ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿಚಾರಣೆ ಹಾಗೂ ತನಿಖೆ ಮುಂದುವರಿದಿದೆ.























