Home ನಮ್ಮ ಜಿಲ್ಲೆ ಕೊಪ್ಪಳ ಕೊಪ್ಪಳ: ಸಚಿವ ವಿ.ಸೋಮಣ್ಣ ಮೇಲೆ ಚೇರ್ ತೂರಾಟ

ಕೊಪ್ಪಳ: ಸಚಿವ ವಿ.ಸೋಮಣ್ಣ ಮೇಲೆ ಚೇರ್ ತೂರಾಟ

0
59

ಕೊಪ್ಪಳ: ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಮೇಲೆ ಕುರ್ಚಿ ತೂರಿರುವ ಘಟನೆ ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಹಿಟ್ನಾಳ ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ ಶಿಲಾನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಮಾಡಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕ್ರಮದ ಆಹ್ವಾನ, ವೇದಿಕೆ ವ್ಯವಸ್ಥೆ ಹಾಗೂ ಪ್ರೋಟೋಕಾಲ್ ವಿಚಾರದಲ್ಲಿ ಅಸಮಾಧಾನಗೊಂಡ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ:  ಬೀದರ್‌: KDP ಸಭೆಯಲ್ಲೇ ಕೈ ಕೈ ಮಿಲಾಯಿಸಿದ ಮುಖಂಡರು

ಪ್ರತಿಭಟನೆ ತೀವ್ರಗೊಂಡಾಗ ಕೆಲ ಕಾಂಗ್ರೆಸ್ ಕಾರ್ಯಕರ್ತರು ವೇದಿಕೆಯತ್ತ ನುಗ್ಗಲು ಪ್ರಯತ್ನಿಸಿದ್ದು, ಈ ವೇಳೆ ಕೇಂದ್ರ ಸಚಿವ ವಿ. ಸೋಮಣ್ಣ ಅವರತ್ತ ಕುರ್ಚಿಗಳನ್ನು ತೂರಿದ್ದಾರೆ. ಆದರೆ ಸಚಿವರೊಂದಿಗೆ ಇದ್ದ ಭದ್ರತಾ ಸಿಬ್ಬಂದಿ ಹಾಗೂ ಅಂಗರಕ್ಷಕರು ಸಮಯಪ್ರಜ್ಞೆ ಪ್ರದರ್ಶಿಸಿ ಕುರ್ಚಿಗಳನ್ನು ಮಧ್ಯದಲ್ಲೇ ತಡೆದ ಪರಿಣಾಮ ದೊಡ್ಡ ಅನಾಹುತ ತಪ್ಪಿದಂತಾಯಿತು.

ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿ ಗದ್ದಲ ಉಂಟಾಗಿ, ಕೆಲಕಾಲ ಕಾರ್ಯಕ್ರಮ ಸ್ಥಗಿತಗೊಳಿಸಲಾಯಿತು. ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ನಂತರ ಸಚಿವ ಸೋಮಣ್ಣ ಅವರನ್ನು ಭದ್ರತೆಯೊಂದಿಗೆ ಸ್ಥಳದಿಂದ ಕರೆದುಕೊಂಡು ಹೋಗಲಾಯಿತು.

ಇದನ್ನೂ ಓದಿ:  ಬಜೆಟ್ ನಂತರ ಅಧಿಕಾರ ಹಂಚಿಕೆ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ

ಈ ಘಟನೆ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಹಾಗೂ ಭದ್ರತೆ ಕುರಿತಾಗಿ ಪ್ರಶ್ನೆಗಳು ಉದ್ಭವವಾಗಿವೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಗಲಾಟೆಯಲ್ಲಿ ಭಾಗವಹಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.