ಕೊಪ್ಪಳ: ಗವಿಸಿದ್ಧೇಶ್ವರ ಮಹಾರಥೋತ್ಸವದ ದಿನವಾದ ಸೋಮವಾರ ಭಕ್ತರನ್ನು ಆಶೀರ್ವದಿಸುವಾಗ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಭಕ್ತರ ಪ್ರೀತಿ, ಸೇವೆಗೆ ಕಣ್ಣೀರಾದರು.
ಬೈಲಹೊಂಗಲದ ತರಕಾರಿ ಮಾರುವ ಅಜ್ಜಿಯ ಸೇವಾ ಮನೋಭಾವನೆ ಹಾಗೂ ಪ್ರೀತಿ ಕೊಂಡಾಡುತ್ತಾ ಮಾತನಾಡಿದ ಗವಿಶ್ರೀ, `ತರಕಾರಿ ಮಾರುವ ಅಜ್ಜಿ ಒಂದು ಪುಟ್ಟಿ ಕೊತ್ತಂಬರಿ ಸೊಪ್ಪು ತಂದು ಜಾತ್ರೆಗೆ ನೀಡಿದ್ದಾಳೆ. ಬದುಕಿನ ಬಂಡಿ ಸಾಗಿಸಲು ತರಕಾರಿ ವ್ಯಾಪಾರ ಮಾಡುತ್ತಿದ್ದರೂ ಮಠಕ್ಕೆ ಅಜ್ಜಿಯ ರೀತಿಯ ಅನೇಕ ಭಕ್ತರು ತಮಗೆ ಸಾಧ್ಯವಾದಷ್ಟು ಕೊಡುತ್ತಿದ್ದಾರೆ’ ಎಂದು ಕಣ್ಣೀರಾದರು.
`ಜನರ ಪ್ರೀತಿ, ಸೇವಾ ಮನೋಭಾವನೆ, ಕಕ್ಕುಲಾತಿ, ಅವರ ಭಕ್ತಿಗೆ ಏನು ಹೇಳಿದರೂ ಕಡಿಮೆಯೇ. ಜಾತ್ರೆ ಯಶಸ್ಸು ಕಾಣುವುದು ಭಕ್ತರ ಸಡಗರ ಹಾಗೂ ಶ್ರಮದಿಂದಲೇ ಹೊರತು ಅದಕ್ಕೆ ನಾನೊಬ್ಬನೇ ಕಾರಣ ಅಲ್ಲ’ ಎಂದು ಭಾವುಕರಾಗಿ, ಶ್ರೀಗಳ ಕಣ್ಣಿನಿಂದ ನೀರು ಜಾರಿದವು. ಕಣ್ಣೀರು ಒರೆಸಿಕೊಂಡು, ಭಕ್ತರನ್ನು ನೋಡಿ, ಮುಗುಳ್ನಗುತ್ತಾ ಆಶೀರ್ವದಿಸಿದರು. ಭಕ್ತರ ಭಕ್ತಿಗೆ ನಾವು ಏನು ತಾನೇಕೊಡಲು ಸಾಧ್ಯ? ಎನ್ನುವ ಅವರ ಬಾಯಿಯಿಂದ ಬಂದ ಮಾತು ಬಹಳ ಭಾರವಾಗಿತ್ತು.
ಸಮಾಜದಲ್ಲಿ, ದೈನಂದಿನ ಬದುಕಿನಲ್ಲಿ ಹಾಗೂ ಅನೇಕರ ವೈಯಕ್ತಿಕ ಜೀವನದಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತಿದ್ದು, ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ನಕಾರಾತ್ಮಕ ಇದೆ ಎಂದು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಜನರಲ್ಲಿ ಸೇವೆ, ಪ್ರೀತಿ, ಅಂತಃಕರಣದ ಮತ್ತು ಸಕಾರಾತ್ಮಕ ಪರಿಣಾಮ ಬೀರುವ ಕೆಲಸ ಮಾಡಬೇಕು. ಒತ್ತಾಯ ಪೂರ್ವಕವಾಗಿ ಯಾವ ಕೆಲಸವನ್ನೂ ಮಾಡಲು ಮತ್ತು ಮಾಡಿಸಲು ಆಗುವುದಿಲ್ಲ. ಸ್ವಯಂಪ್ರೇರಣೆಯಿಂದ ಮಾಡುವ ಕೆಲಸಗಳು ಮಾತ್ರ ಶಾಶ್ವತ ಅಭಿನವಶ್ರೀ ಬೇಸರದ ಜತೆಗೆ ಭರವಸೆಯ ಮಾತುಗಳನ್ನಾಡಿದರು.






















