ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂಬ ಖ್ಯಾತಿಯ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಸೋಮವಾರ ಸಂಜೆ, ಗೋಧೂಳಿ ಸಮಯಕ್ಕೆ ಮಹಾರಥೋತ್ಸವವು ಯಶಸ್ವಿಯಾಗಿ ಜರುಗಿತು. ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ರಥೋತ್ಸವಕ್ಕೆ ಚಾಲನೆ ನೀಡಿದರು.
ಗವಿಮಠದ ಆವರಣದಲ್ಲಿ ವೈಜ್ಞಾನಿಕವಾಗಿ ಸಜ್ಜುಗೊಳಿಸಿದ್ದ ರಥಕ್ಕೆ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಪೂಜೆ ಸಲ್ಲಿಸಿದರು. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸಾಥ್ ನೀಡಿದರು. ಬಳಿಕ ಸಾಗಿದ ರಥ ರಾಜ ಗಾಂಭಿರ್ಯದಿಂದ ಪಾದಗಟ್ಟಿ ತಲುಪಿ, ಮರಳಿ ಮೂಲಸ್ಥಾನ ತಲುಪುತ್ತಿದ್ದಂತೆ ಭಕ್ತರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಗವಿಸಿದ್ಧೇಶ್ವರರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯ ಮೂಲಕ ಬಾಜಾ ಭಜಂತ್ರಿಯೊಂದಿಗೆ ಗವಿಮಠದ ಗರ್ಭಗುಡಿಯ ಮೇಲ್ಭಾಗದ ಗದ್ದುಗೆಯಿಂದ ಮೆರವಣಿಗೆಯ ಮೂಲಕ ತರಲಾಯಿತು.
ಬಳಿಕ ನಂದಿಗೋಲು, ಕಂಸಾಳೆ ವಾದ್ಯ ಸೇರಿ ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ರಥ ಸಾಗುತ್ತಿದ್ದಂತೆಯೇ `ಗವಿಸಿದ್ಧೇಶ್ವರ ಮಹಾರಾಜಕೀ….ಜೈ’ ಎನ್ನುವ ಉದ್ಘೋಷಗಳನ್ನು ಭಕ್ತರು ಕೂಗಿದರು.
ಇದನ್ನೂ ಓದಿ: ಭಕ್ತರ ಪ್ರೀತಿ, ಸೇವೆಗೆ ಕಣ್ಣೀರಾದ ಗವಿಸಿದ್ಧೇಶ್ವರ ಸ್ವಾಮೀಜಿ
ಟ್ರ್ಯಾಕ್ಟರ್, ಕ್ರೂಸರ್, ಬಸ್, ದ್ವಿಚಕ್ರ ವಾಹನ ಹಾಗೂ ಪಾದಯಾತ್ರೆಯ ಮೂಲಕ ಭಕ್ತರು ರಥೋತ್ಸವಕ್ಕೆ ಆಗಮಿಸಿದ್ದರು. ಕೊಪ್ಪಳ, ರಾಯಚೂರು, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ ಲಕ್ಷಾಂತರ ಭಕ್ತರು ಸಾಕ್ಷಿಯಾಗಿದ್ದರು. ಸಂಚಾರದಟ್ಟಣೆ ಉಂಟಾದರೂ, ಪೊಲೀಸರು ನಿಯಂತ್ರಿಸಿದರು.
ನೂಕುನುಗ್ಗಲಿನಲ್ಲಿಯೇ ಭಕ್ತರು ರಥಕ್ಕೆ ಉತ್ತತ್ತಿ ಎಸೆದು, ಆಯುಷ್ಯ, ಆರೋಗ್ಯ ಮತ್ತು ಐಶ್ವರ್ಯ ದಯಪಾಲಿಸುವಂತೆ ಗವಿಸಿದ್ಧೇಶ್ವರರಲ್ಲಿ ಪ್ರಾರ್ಥಿಸಿದರು. ಬಾಳೆಹಣ್ಣು ಎಸೆಯದಂತೆ ಭಕ್ತರಿಗೆ ತಿಳಿಸಲಾಗಿತ್ತು. ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್, ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ, ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಶಾಸಕ ಗಾಲಿ ಜನಾರ್ದನ ರೆಡ್ಡಿ ಗವಿಶ್ರೀ ಕಾರ್ಯ ಮತ್ತು ಗವಿಮಠದ ಪರಂಪರೆ ಹಾಡಿ, ಹೊಗಳಿದರು. ಕಾಗಿನೆಲೆಯ ಕನಕಗುರು ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.





















