ಕೊಪ್ಪಳ: ರಾಜ್ಯ ರಾಜಕೀಯದಲ್ಲಿ ತನ್ನದೇ ಆದ ಮುದ್ರೆಯನ್ನು ಮೂಡಿಸಿದ್ದ ಮಾಜಿ ವಿಧಾನಪರಿಷತ್ ಸದಸ್ಯ ಕರಿಯಣ್ಣ ಸಂಗಟಿ (61) ಸೋಮವಾರ ಬೆಳಗಿನ ಜಾವ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಹಲವು ತಿಂಗಳಿಂದ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಮೃತರಿಗೆ ಪತ್ನಿ, ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ. ಅವರ ಅಂತ್ಯಕ್ರಿಯೆ ಮಂಗಳವಾರ ಸ್ವಗ್ರಾಮ ಯಲಮಗೇರಿ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ರಾಜಕೀಯ ಜೀವನದ ಪಯಣ: ಕರಿಯಣ್ಣ ಸಂಗಟಿ ಅವರು ವಿದ್ಯಾರ್ಥಿ ಹಂತದಿಂದಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದು, 1998ರಲ್ಲಿ ಕೊಪ್ಪಳ ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡಾಗ ಮೊದಲ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಎಸ್. ಎಂ, ಕೃಷ್ಣ ಅವರ ಆಪ್ತರಾಗಿದ್ದ ಅವರು, 2000ರಲ್ಲಿ ವಿಧಾನಪರಿಷತ್ ಸದಸ್ಯರಾಗಿ ನೇಮಕಗೊಂಡಿದ್ದರು. ಬಳಿಕ 2008ರಲ್ಲಿ ಕೊಪ್ಪಳ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ, 2018ರಲ್ಲಿ ಗಂಗಾವತಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಎಲ್ಲರೊಂದಿಗೆ ಆತ್ಮೀಯ ಸಂಬಂಧ: ಕರಿಯಣ್ಣ ಅವರು ಡಿ. ಕೆ. ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರೂ, ರಾಜಕೀಯದಾಚೆ ಎಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ನಾಯಕನಾಗಿ ಹೆಸರು ಮಾಡಿದ್ದರು.
ರೆಡ್ಡಿ ಗೆಲುವಿನಲ್ಲಿ ಪಾತ್ರ: 2023ರ ವಿಧಾನಸಭಾ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ನೇತೃತ್ವದ ಕೆಆರ್‌ಪಿಪಿ ಪಕ್ಷದ ಗೆಲುವಿನಲ್ಲಿ ಕರಿಯಣ್ಣ ಸಂಗಟಿ ಪ್ರಮುಖ ಪಾತ್ರ ವಹಿಸಿದ್ದರು. ಇರಕಲ್ಲಗಡ ಭಾಗದಲ್ಲಿ ತಮ್ಮ ಪ್ರಭಾವದ ಮೂಲಕ ಮತಗಳನ್ನು ಒಗ್ಗೂಡಿಸಿ ಗೆಲುವಿಗೆ ನೆರವಾದರು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆ ನಡೆದಿದೆ.
ಅನೇಕ ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ಅಂತಿಮ ದರ್ಶನಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ರಾಜ್ಯದ ಗಣ್ಯರು ಸಂತಾಪ ಸೂಚಿಸಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಶೋಕ ವಾತಾವರಣ ನಿರ್ಮಾಣವಾಗಿದೆ. ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕರಿಯಣ್ಣ ಸಂಗಟಿ ಅವರು ಜನಪರ ರಾಜಕಾರಣ ಹಾಗೂ ಸರಳ ವ್ಯಕ್ತಿತ್ವದ ಮೂಲಕ ಜನಮನ ಗೆದ್ದ ನಾಯಕನಾಗಿ ಸದಾ ಸ್ಮರಣೀಯರಾಗಿದ್ದಾರೆ.























