ಕೊಪ್ಪಳ: ಗವಿಸಿದ್ದಪ್ಪ ಕೊಲೆ ಘಟನೆಗೆ ಸಂಬಂಧಿಸಿದಂತೆ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಿಂದೂ-ಮುಸ್ಲಿಮರ ನಡುವೆ ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್‌ಐಆರ್ ದಾಖಲಾಗಿದೆ.
ನಗರದ ಕುರುಬರ ಓಣಿಯ ಗವಿಸಿದ್ದಪ್ಪ ನಾಯಕ ಎನ್ನುವ ಯುವಕನನ್ನು ಆ. 3ರಂದು ಮುಸ್ಲಿಂ ಯುವಕನೋರ್ವ ಕೊಲೆ ಮಾಡಿದ್ದಾನೆ ಎಂದು ಪ್ರಕರಣ ದಾಖಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಗವಿಸಿದ್ದಪ್ಪ ನಾಯಕ ಕುಟುಂಬದವರಿಗೆ ಸಾಂತ್ವನ ಹೇಳಲು ಆ. 10ರಂದು ಕೊಪ್ಪಳಕ್ಕೆ ಬಂದಿದ್ದು, ಆಗ ಶಾಸಕ ಯತ್ನಾಳ ಮಾತನಾಡಿ, `ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ ಐದು ಲಕ್ಷ ರೂ. ಕೊಡುತ್ತೇನೆ. ಕೊಲೆ ಮಾಡುವ ಮುಸ್ಲಿಮರಿಗೆ ಉತ್ತರ ನೀಡಬೇಕಿದೆ. ಸದ್ಯ ರಾಜ್ಯದಲ್ಲಿ ಸಾಬರ ಸರ್ಕಾರವಿದೆ’ ಎಂದು ಹೇಳಿದ್ದರು. ಹೇಳಿಕೆ ಸಾಕಷ್ಟು ಟೀಕೆಗೆ ಕಾರಣಾಗಿತ್ತು. ಈ ಹಿನ್ನೆಲೆ ನಗರದ ಕುವೆಂಪು ನಗರದ ನಿವಾಸಿ ಅಬ್ದುಲ್ ಕಲಾಂ ದೂರು ನೀಡಿದ್ದಾರೆ.
ಯತ್ನಾಳ ಹೇಳಿಕೆಯಿಂದಾಗಿ ಎರಡು ಧರ್ಮಗಳ ನಡುವೆ ದ್ವೇಷ ಬೆಳೆಯುವಂತಾಗಿದೆ. ಮುಸ್ಲಿಂ ಮಹಿಳೆಯರನ್ನು ಕೆಟ್ಟ ಮನಸ್ಥಿತಿಯಿಂದ ನೋಡುತ್ತಿದ್ದು, ಅಲ್ಲದೆ ಅವರನ್ನು ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಅಬ್ದುಲ್ ತಿಳಿಸಿದ್ದಾರೆ.
ರಜಾಕ್ ದೂರಿಗೆ ಹಿಂಬರಹ: ಯತ್ನಾಳ ವಿರುದ್ಧ ದೂರು ದಾಖಲಿಸಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಅಬ್ದುಲ್ ರಜಾಕ್‌ಖಾನ್ ಕೂಡ ಬುಧವಾರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಈ ದೂರಿಗೆ ಪೊಲೀಸರು ಹಿಂಬರಹ ನೀಡಿದ್ದು, ʻಸ್ಥಳೀಯರು ಕೊಟ್ಟ ದೂರು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ. ಅದರಲ್ಲಿಯೇ ಉಳಿದವರ ದೂರನ್ನು ಪರಿಗಣಿಸಲಾಗುತ್ತದೆ’ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.