ಬೆಂಗಳೂರು: ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ವೈ. ನಂಜೇಗೌಡ (KY Nanjegowda) ಅವರನ್ನು ಶಾಸಕ ಸ್ಥಾನದಿಂದ ಅಸಿಂಧುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ದ್ವಿ ಸದಸ್ಯ ಪೀಠವು ಹೈಕೋರ್ಟ್ ಆದೇಶವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ನಿರ್ಧರಿಸಿದೆ. ಪೀಠವು ಕೇಂದ್ರ ಚುನಾವಣಾ ಆಯೋಗಕ್ಕೆ (Election Commission of India) ಸೂಚನೆ ನೀಡಿದಂತೆ, ನಾಲ್ಕು ವಾರಗಳೊಳಗಾಗಿ ಪ್ರತಿವಾದಿಗಳು ತಮ್ಮ ಉತ್ತರವನ್ನು ಸಲ್ಲಿಸಬೇಕು.
ಅದೇ ಸಂದರ್ಭದಲ್ಲಿ, ಮತ ಮರು ಎಣಿಕೆ ನಡೆಸಿ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲಾಗಿದೆ.
ಈ ಕ್ರಮದ ಮೂಲಕ, ನಂಜೇಗೌಡರು ತಾತ್ಕಾಲಿಕವಾಗಿ ತಮ್ಮ ಶಾಸಕ ಸ್ಥಾನವನ್ನು ಕಾಯ್ದುಕೊಳ್ಳಬಹುದಾಗಿದೆ. 2023 ಫಲಿತಾಂಶದ ಮರು ಎಣಿಕೆ ಕೋರಿ ಪರಾರ್ಜಿತ ಅಭ್ಯರ್ಥಿ ಮಂಜುನಾಥಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಹಾಲಿ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಅವರ ಶಾಸಕತ್ವವನ್ನು ಅಸಿಂಧು ಮಾಡಿ, ಮತ ಮರು ಎಣಿಕೆಗೆ ಸೂಚನೆ ನೀಡಿತು. ಅಸಿಂಧು ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಸಮಯ ನೀಡಿತ್ತು. ಹೈಕೋರ್ಟ್ ಆದೇಶದಂತೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಕೆ.ವೈ ನಂಜೇಗೌಡ ಸದ್ಯ ತಾತ್ಕಲಿಕ ರಿಲಿಫ್ ಪಡೆದಿದ್ದಾರೆ.