ಕೋಲಾರ: ಅದೇನೋ ಏಕೋ ನನಗೆ ಪ್ರತಿ ಬಾರಿಯೂ ಗೃಹ ಖಾತೆಯನ್ನೇ ಕೊಡುತ್ತಾರೆ. ಇದೀಗ ಮೂರನೇ ಬಾರಿಗೆ ಗೃಹ ಸಚಿವನಾಗಿ ಸಮರ್ಥವಾಗಿ ನನ್ನ ಖಾತೆ ನಿರ್ವಹಿಸಿದ್ದೇನೆ. ನನ್ನನ್ನು ಅಸಮರ್ಥ ಗೃಹ ಸಚಿವ ಎಂದು ಮೂದಲಿಸುವ ಟೀಕೆಗಳಿಗೆ ಜಗ್ಗುವವನು ನಾನಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದರು.
ಮಂಗಳವಾರ ಕೆಜಿಎಫ್‌ನಲ್ಲಿ 539 ಕೋಟಿ ರೂ. ಹೂಡಿಕೆಯ 1,000 ಜನರಿಗೆ ತರಬೇತಿ ನೀಡುವ ಕೇಂದ್ರೀಯ ಮೀಸಲು ಪಡೆ ತರಬೇತಿ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲೋ ಒಂದು ಕೊಲೆಯಾದರೆ ಅದರ ಗಂಧ ಗಾಳಿಯು ಗೊತ್ತಿಲ್ಲದವರು ಪರಮೇಶ್ವರ್ ಅಸಮರ್ಥ ಸಚಿವ ಎಂದು ಟೀಕಿಸುತ್ತಾರೆ. ಮೂರು ಬಾರಿ ಗೃಹ ಸಚಿವನಾಗಿ ಇಲಾಖೆಯಲ್ಲಿ ಮಾಡಿರುವ ಕಲ್ಯಾಣ ಕಾರ್ಯಕ್ರಮಗಳು ಅವರ ಗಮನಕ್ಕೆ ಬರುವುದಿಲ್ಲ ಎಂದು ಸಚಿವರು ವಿವರಿಸಿದರು.
2020ರಲ್ಲಿ ನಾನೇ ಆರಂಭಿಸಿದ ಪೊಲೀಸ್ ಗೃಹ ನಿರ್ಮಾಣ ಯೋಜನೆಯಡಿ ಇದುವರೆಗೂ 40,712 ಮನೆಗಳನ್ನು ನಿರ್ಮಿಸಲಾಗಿದೆ, ರಾಜ್ಯದ ಎಲ್ಲ 1.05 ಲಕ್ಷ ಪೊಲೀಸರಿಗೂ ಸುಸಜ್ಜಿತ ಮನೆಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ದೇಶದ ಇತರೆ ರಾಜ್ಯಗಳ ವೇತನ ವ್ಯವಸ್ಥೆ ಅಧ್ಯಯನ ಮಾಡಿ ನಮ್ಮ ರಾಜ್ಯದ ಪೊಲೀಸರ ವೇತನ ಹೆಚ್ಚಿಸಲಾಗಿದೆ, ತಲೆಗೆ ಭಾರವಾಗಿದ್ದ ಟೋಪಿಗಳ ಬದಲಿಗೆ ಕ್ಯಾಪ್ ನೀಡುವ ವ್ಯವಸ್ಥೆ ರೂಪಿಸಲಾಗಿದೆ ಎಂದು ವಿವರಿಸಿದರು. ಇದೀಗ ವರ್ಗಾವಣೆ ನಿಯಮ ಬದಲಿಸಿ ಕನಿಷ್ಟ ಎರಡು ವರ್ಷ ಒಂದೇ ಠಾಣೆಯಲ್ಲಿ ಸೇವೆ ಸಲ್ಲಿಸಬೇಕೆಂಬ ನಿಯಮ ಜಾರಿಗೆ ತರಲಾಗಿದೆ ಎಂದು ಹೇಳಿದರು.
ಸಾರ್ವಜನಿಕರಿಗೆ ನ್ಯಾಯ ಒದಗಿಸುವಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಕೆಲಸ ಮಾಡದೇ ಈ ಗೌರವ ಸಿಗುವುದಿಲ್ಲ ಎಂದರು. ಕಾಂಗ್ರೆಸ್ ಅಧ್ಯಕ್ಷನಾಗಿ ಮನೆಮನೆಗೆ ಕಾಂಗ್ರೆಸ್ ಯೋಜನೆ ರೂಪಿಸಿದ್ದ ನಾನು ಇದೀಗ ‘ಮನೆಮನೆಗೆ ಪೊಲೀಸ್’ ಕಾರ್ಯಕ್ರಮ ಜಾರಿ ಮಾಡಿ ರಾಜ್ಯಾದ್ಯಂತ ಪೊಲೀಸರು ಪ್ರತಿ ಮನೆಗಳಿಗೆ ಭೇಟಿ ನೀಡುವ ವ್ಯವಸ್ಥೆ ಮಾಡಿದ್ದೇನೆ ಎಂದು ಸಚಿವರು ತಮ್ಮ ಕಾರ್ಯ ನಿರ್ವಹಣೆಗೆ ಸಮಜಾಯಿಷಿ ನೀಡಿದರು.
15 ಸಾವಿರ ಪೇದೆಗಳ ಹುದ್ದೆ ಖಾಲಿ ಇದ್ದು ಈ ಬಾರಿಯ ಬಜೆಟ್‌ನಲ್ಲಿ ಕನಿಷ್ಠ 10 ಸಾವಿರ ಹುದ್ದೆ ಭರ್ತಿಗೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಹಿಂದಿನ ಸರ್ಕಾರದ ಹಗರಣದಿಂದಾಗಿ 545 ಉಪನಿರೀಕ್ಷಕರ ನೇಮಕಾತಿ ನಿಂತಿತ್ತು. ಕಳೆದ ಐದು ವರ್ಷ ಯಾರನ್ನೂ ನೇಮಕ ಮಾಡಲಾಗಿರಲಿಲ್ಲ. ನಾನು ಬಂದ ಮೇಲೆ ಹಗರಣ ಮುಕ್ತ ಪರೀಕ್ಷೆ ನಡೆಸಿ 954 ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕ ಮಾಡಲಾಗಿದೆ. ಅವರು ತರಬೇತಿಯಲ್ಲಿದ್ದು, ಮುಂದಿನ ತಿಂಗಳು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದರು.
ಸೈಬರ್ ಅಪರಾಧಗಳ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ 1.05 ಪೊಲೀಸರಿಗೆ ಸೈಬರ್ ತರಬೇತಿ ನೀಡಲಾಗುತ್ತಿದೆ. ಇದೆಲ್ಲಾ ನನ್ನ ಸಾಧನೆ ಅಲ್ಲವೇ? ಎಂದು ಸಚಿವರು ಪ್ರಶ್ನಿಸಿದರು.
ಇವೆಲ್ಲದರ ನಡುವೆಯೂ ಇಲಾಖೆಯಲ್ಲಿ ಅಲ್ಲೊಬ್ಬರು ಇನ್ನೊಬ್ಬರು ಕಪ್ಪುಕುರಿಗಳು ಇರುತ್ತಾರೆ. ಅಂತಹವರು ಎಷ್ಟೇ ದೊಡ್ಡವರಾಗಿದ್ದರು ಕಠಿಣ ಕ್ರಮ ಜರುಗಿಸದೆ ಬಿಡುವುದಿಲ್ಲ ಎಂದು ಸಚಿವ ಪರಮೇಶ್ವರ ಹೇಳಿದರು.























