ಕೋಲಾರ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂಬುದನ್ನು ನಾವೂ ಹೇಳುತ್ತಾ ಬಂದಿದ್ದೇವೆ. ಆದರೆ, ಅದು ಸಿದ್ದರಾಮಯ್ಯ ಅಧಿಕಾರ ಅವಧಿ ಬಳಿಕವಷ್ಟೇ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದರು.
ಕೋಲಾರದಲ್ಲಿ ಮಾಧ್ಯಮದ ಜತೆ ಮಾತನಾಡಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಒತ್ತಾಯವೂ ಆಗಿದೆ, ಆದರೆ ಸಿದ್ದರಾಮಯ್ಯ ಅವರ ಅವಧಿ ಮುಗಿದ ಬಳಿಕವೇ ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ನಮ್ಮ ನಿಲುವು ಎಂದು ತಿಳಿಸಿದರು.
ಇದನ್ನೂ ಓದಿ: ಜನರ ಆಶೀರ್ವಾದದಿಂದ ದೀರ್ಘಾವಧಿ ಸಿಎಂ ದಾಖಲೆ ಸಾಧ್ಯ
ಸಿದ್ದರಾಮಯ್ಯನವರೇ ನಮ್ಮ ನಾಯಕರು, ಶಿವಕುಮಾರ್ ಸಹ ಮುಖ್ಯಮಂತ್ರಿ ಆಗಬೇಕು. ಏಕೆಂದರೆ ಅವರ ರಕ್ತದಲ್ಲೇ ಕಾಂಗ್ರೆಸ್ ಇದೆ. ನಾವೆಲ್ಲಾ ಬೇರೆ ಪಕ್ಷಗಳಿಂದ ಬಂದವರು. ಆದರೆ ಡಿ.ಕೆ. ಶಿವಕುಮಾರ್ ರಕ್ತಗತವಾಗಿ ಕಾಂಗ್ರೆಸ್ ಪಕ್ಷದವರು. ರಕ್ತವನ್ನು ಬದಲಾಯಿಸಲು ಸಾಧ್ಯವೇ ಇಲ್ಲ ಎಂದು ಹೇಳಿದರು.
2028ರ ವರೆಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಜಮೀರ್ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು. ನವೆಂಬರ್ ಕ್ರಾಂತಿ, ಡಿಸೆಂಬರ್ ಕ್ರಾಂತಿ ಎಂದು ಹೇಳಿದವರು ಈಗ ಜನವರಿ ಸಂಕ್ರಾಂತಿ ಎನ್ನುತ್ತಿದ್ದಾರೆ. ಆದರೆ ಯಾವುದೇ ಕ್ರಾಂತಿಯೂ ನಡೆಯುವುದಿಲ್ಲ. ಹೈಕಮಾಂಡ್ ಸಂಪೂರ್ಣವಾಗಿ ಸಿದ್ದರಾಮಯ್ಯ ಜೊತೆಗಿದೆ. ಕ್ರಾಂತಿ ಎಂದು ಮಾತನಾಡಿದವರಿಗೆ ಈಗ ವಾಂತಿ–ಭೇದಿ ಆಗುತ್ತಿದೆ ಎಂದು ವ್ಯಂಗ್ಯವಾಡಿದರು.























