ಕೋಲಾರ(ಬಂಗಾರಪೇಟೆ): ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಬಾಲಕಿಯನ್ನು ನಾಲ್ಕು ತಿಂಗಳ ಗರ್ಭಿಣಿ ಮಾಡಿರುವ ಕುರಿತು ಆಕೆಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಕೋಲಾರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡನೊಬ್ಬನ ವಿರುದ್ಧ ಪೊಕ್ಸೋ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ತಾಲೂಕಿನ ತ್ಯಾರನಹಳ್ಳಿ ಗ್ರಾಮದ ನಿವಾಸಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ಟಿ.ಎ. ರಾಮೇಗೌಡ ಬಂಧಿತ ಆರೋಪಿ, ಸಿದ್ದನಹಳ್ಳಿ ಗ್ರಾಮದ 14 ವರ್ಷದ ಅಪ್ರಾಪ್ತೆ ಬಾಲಕಿಯ ಮೇಲೆಯೇ ರಾಮೇಗೌಡ ಲೈಂಗಿಕ ಕಿರುಕುಳ ನೀಡಿದ್ದು ಈಗ ಬಾಲಕಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಳೆ.
ಲವ್ ಪ್ರಕರಣ ಒಂದರಲ್ಲಿ ರಾಮೇಗೌಡ ಬಾಲಕಿಗೆ ಬುದ್ದಿವಾದ ಹೇಳಿ ಮನಸ್ಸು ಪರಿವರ್ತನೆ ಮಾಡಲು ಅವರ ಮನೆಗೆ ಕರೆದುಕೊಂಡು ಹೋಗಿ ಕೆಲ ದಿನಗಳು ಇರಿಸಿಕೊಂಡಿದ್ದರು. ಆರೋಪಿ ರಾಮೇಗೌಡ ಬಾಲಕಿಯನ್ನು ಬಲವಂತವಾಗಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾನೆ. ರಾಮೇಗೌಡನಿಗೆ ಇಬ್ಬರು ಹೆಂಡತಿಯರಿದ್ದರೂ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.
ಈ ಕುರಿತು ಬಾಲಕಿಯ ಪೋಷಕರು ಕೇಳಿದಾಗ ರಾಮೇಗೌಡ ತಾವು ರೈತ ಸಂಘದ ಜಿಲ್ಲಾಧ್ಯಕ್ಷ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದು ನನಗೆ ಎಲ್ಲರ ಬೆಂಬಲವಿದೆ. ನನ್ನನ್ನು ನೀವು ಏನನ್ನೂ ಮಾಡಲು ಸಾಧ್ಯವಿಲ್ಲವೆಂದು ಬೆದರಿಕೆ ಹಾಕಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾನೆ ಎಂದು ದೂರಲಾಗಿದೆ. ದೂರು ಬಂದ ತಕ್ಷಣ ಬಂಗಾರಪೇಟೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.






















