ಕೋಲಾರ: ನಿರ್ಮಾಣಗೊಂಡು ಸಂಚಾರಕ್ಕೆ ಮುಕ್ತಗೊಂಡ ನಂತರ ಪದೇ ಪದೇ ಅಪಘಾತಗಳ ಕಾರಣ ಸಾವಿನ ಹೆದ್ದಾರಿ ಎಂಬ ಆತಂಕಕ್ಕೆ ತುತ್ತಾಗಿರುವ ಚೆನ್ನೈ ಬೆಂಗಳೂರು ಕಾರಿಡಾರ್ ರಸ್ತೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ, ಹತ್ತಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಸೋಮವಾರ ಕಾರಿಡಾರ್ ರಸ್ತೆಯ ಐತಾಂಡ್ಲಹಳ್ಳಿ ಬಳಿ ಆಂಧ್ರಪ್ರದೇಶ ಮೂಲದ ಸಂಸ್ಥೆ ಎಂದು ಕಾರಿಡಾರ್ ವಿಶ್ರಾಂತಿ ತಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಉಟೋಪಚಾರದ ವ್ಯವಸ್ಥೆಗಾಗಿ ಬೆಂಗಳೂರಿನಿಂದ ಬಂದಿದ್ದ ಕ್ಯಾಟರಿಂಗ್ ತಂಡದ ಬಾಣಸಿಗರು ಸಂಜೆ ಬೆಂಗಳೂರಿಗೆ ವಾಪಸಾಗುತ್ತಿದ್ದ ಟೆಂಪೋ ಟ್ರಾವೆಲರ್ ವಾಹನವು ಸೋಮವಾರ ರಾತ್ರಿ 7 ವೇಳೆಗೆ ಕೆಟ್ಟು ನಿಂತಿದ್ದ ಆಂಬುಲೆನ್ಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹೆದ್ದಾರಿಯ ಬದಿಗೆ ಉರುಳಿ ಬಿದ್ದು ಈ ದುರಂತ ಸಂಭವಿಸಿದೆ.
ಮೃತಪಟ್ಟ ನಾಲ್ಕು ಮಂದಿ ಕ್ಯಾಟರಿಂಗ್ ಸಿಬ್ಬಂದಿಯಾಗಿದ್ದು ಉಳಿದ ಹತ್ತಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಂಗಾರಪೇಟೆ ಕೋಲಾರ ಮತ್ತು ಹೊಸಕೋಟೆ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.


























