ಕೋಲಾರ: ಕಳೆದ ರಾತ್ರಿ ಮೌನಿ ಅಮಾವಾಸ್ಯೆ ಹಿನ್ನಲೆ ಗೊಂಬೆಯ ಮೇಲೆ ಮಾಟ ಮಂತ್ರ ಪ್ರಯೋಗ ಮಾಡಿ ಗ್ರಾಮದ ಸ್ಮಶಾನ ಮಧ್ಯೆ ಇರುವ ದೇವಸ್ಥಾನದಲ್ಲಿ ಭಯಾನಕ, ಬೆಚ್ಚಿ ಬೀಳಿಸುವ ಪೂಜೆ ಮಾಡಿರುವ ಮಂತ್ರವಾದಿಯೋರ್ವನನ್ನ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಮಾಲೂರು ತಾಲೂಕಿನ ಕುಂದೇನಹಳ್ಳಿ ದಿನ್ನೆಯಲ್ಲಿ ನಡೆದಿದೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕು ಅರಳೇರಿ ಬಳಿ ದೇವಾಲಯದ ಪೂಜಾರಿಯನ್ನ ಲಾಂಗ್‌ನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಬೈಕ್‌ನಲ್ಲಿ ಬರುತ್ತಿದ್ದವನನ್ನು ಅಡ್ಡಗಟ್ಟಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಇದಾಗಿದ್ದು, ಆಂಜಿನಪ್ಪ ಅಲಿಯಾಸ್ ಆಂಜಿ (45) ಕೊಲೆಯಾದ ವ್ಯಕ್ತಿಯಾಗಿದ್ದಾನೆ.
ಮಾಲೂರು ತಾಲೂಕು ಕಲ್ಲೂರು ಗ್ರಾಮದ ಚೌಡೇಶ್ವರಿ ದೇವಾಲಯದ ಪೂಜಾರಿಯಾಗಿರುವ ಆಂಜಿ ಕಳೆದ ರಾತ್ರಿ ಅಮಾವಾಸ್ಯೆ ಹಿನ್ನಲೆಯಲ್ಲಿ ಗೊಂಬೆಯ ಮೇಲೆ ಮಾಟ ಮಂತ್ರ ಪ್ರಯೋಗ ಮಾಡಿದ್ದಾನೆ.
ಇದನ್ನೂ ಓದಿ: ಬಜೆಟ್ ಘೋಷಣೆಯಂತೆ ಚಾಲುಕ್ಯ ಉತ್ಸವದ ಆಯೋಜನೆ
ಗ್ರಾಮದ ಸ್ಮಶಾನ ಮಧ್ಯೆ ಇರುವ ದೇವಸ್ಥಾನದಲ್ಲಿ ಭಯಾನಕ ಬೆಚ್ಚಿ ಬೀಳಿಸುವ ಅಷ್ಟ ಮಂಗಲ ಹಾಕಿ ಮಧ್ಯೆ ಮಣ್ಣಿನ ಗೊಂಬೆಯ ಆಕೃತಿ ಮಾಡಿ ಅದರಲ್ಲಿ ಗೊಂಬೆಗೆ ಎಲ್ಲ ಭಾಗಗಳಲ್ಲಿ ಮೊಳೆಗಳನ್ನು ಚುಚ್ಚಿ ಪೂಜೆ ಮಾಡಲಾಗಿದೆ. ಹುಲ್ಕೂರು ಗ್ರಾಮದ ಕಾಳಿಕಾಂಬ ದೇವಸ್ಥಾನದ ಬಳಿ ಮಾಟ ಮಂತ್ರ ಮಾಡಿದ್ದ ಕುರುಹು ಸದ್ಯ ಪತ್ತೆಯಾಗಿದೆ. ಅಮಾವಾಸ್ಯೆ ಹಿನ್ನಲೆ ಮಣ್ಣಿನ ಗೊಂಬೆ, ದೆವ್ವ ಪೀಡೆ ಪಿಶಾಚಿ ಭಾದೆಗಳಿಂದ ರಕ್ಷಣೆಗಾಗಿ ಸಾಕಷ್ಟು ಜನ ಆಂಜಿನಪ್ಪ ಬಳಿ ಬರುತ್ತಿದ್ದರು.
ನಿನ್ನೆ ರಾತ್ರಿಯೂ ಕೂಡ ಹಲವಾರು ಮಂದಿ ಬಂದು ಪೂಜೆ ಮುಗಿಸಿ ತೆರಳಿದ್ದರು ಎನ್ನಲಾಗಿದೆ, ಆದ್ರೂ ಇಬ್ಬರು ಪತ್ನಿಯರನ್ನ ಹೊಂದಿರುವ ಆಂಜಿ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದ್ದು, ಇದು ವಾಮಾಚಾರದಿಂದ ಆಗಿರುವ ಕೊಲೆಯಾ ಅಥವಾ ಜಮೀನು ವಿವಾದದಿಂದ ನಡೆದಿರುವ ಕೊಲೆನಾ ಅನ್ನೋ ಹಲವು ಅನುಮಾನಗಳು ಇದೀಗ ಮೂಡಿದೆ.
ಕೋಲಾರ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಹಾಗೂ ಮಾಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.























