Home Advertisement
Home ನಮ್ಮ ಜಿಲ್ಲೆ ಕಲಬುರಗಿ ಪಾಲಿಕೆ ಸಭೆಯಲ್ಲಿ ಖಮೇನಿಗೆ ಶ್ರದ್ಧಾಂಜಲಿ: ಶಿವಸೇನಾ ಆಕ್ಷೇಪ

ಪಾಲಿಕೆ ಸಭೆಯಲ್ಲಿ ಖಮೇನಿಗೆ ಶ್ರದ್ಧಾಂಜಲಿ: ಶಿವಸೇನಾ ಆಕ್ಷೇಪ

0
18

ಕಲಬುರಗಿ: ಅಮೆರಿಕಾ-ಇಸ್ರೆಲ್ ಜಂಟಿ ದಾಳಿಯಲ್ಲಿ ಹತ್ಯೆಗೀಡಾದ ಇರಾನ್ ಪರಮೋಚ್ಚ ನಾಯಕ ಅಯಾತೊಲ್ಲಾ ಖಮೇನಿಗೆ ಕಲಬುರಗಿ ಮಹಾನಗರ ಪಾಲಿಕೆ ಬಜೆಟ್ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದನ್ನು ಶಿವಸೇನಾ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಆಂದೋಲಾ ಅವರು ಉಗ್ರವಾಗಿ ಖಂಡಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ದಾಳಿಯಾದಾಗ ಪಾಲಿಕೆಯಲ್ಲಿ ಸಂತಾಪ ಸೂಚಿಸಲಿಲ್ಲ. ಅಯಾತೊಲ್ಲಾ ಖಮೇನಿಗೆ ವಿಧಾನಸಭೆ ಮತ್ತು ಸಂಸತ್‌ನಲ್ಲಿ ಸಲ್ಲಿಸದ ಸಂತಾಪ ಪಾಲಿಕೆಯಲ್ಲೇಕೆ? ಎಂದು ಪ್ರಶ್ನಿಸಿದರು.

24ನೇ ವಾರ್ಡಿನ ಕಾಂಗ್ರೆಸ್ ಸದಸ್ಯೆ ಸಯೀದಾ ನೂರ್ ಫಾತಿಮಾ ಅವರು ಸಂತಾಪ ಸೂಚಿಸುವ ನಿರ್ಣಯ ಮಂಡಿಸಿ ಅಯಾತೊಲ್ಲಾ ಖಮೇನಿಯ ಹತ್ಯೆ ಮಾನವೀಯತೆಯ ಕೊಲೆ ಎಂದು ಕೊಂಡಾಡಿದ್ದಾರೆ. ಇರಾನಿನಲ್ಲಿ ಮಹಿಳೆಯರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವಾಗ ಇವರ ಮನ ಮಿಡಿಯಲಿಲ್ಲವೇಕೆ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸದಸ್ಯರ ಜತೆ ಬಿಜೆಪಿ ಸದಸ್ಯರು ಕಾಂಗ್ರೆಸ್ ನಿಲುವನ್ನು ಬೆಂಬಲಿಸಿ ನಾವು ಕೂಡ ಖಮೇನಿ ಬೆಂಬಲಿಗರೆಂದು ಸಾಬೀತುಪಡಿಸಿದ್ದಾರೆ. ಸಂತಾಪ ಸೂಚಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪಾಲಿಕೆ ಸಭೆಯಲ್ಲಿ ಖಮೇನಿಗೆ ಸಂತಾಪ ಸೂಚಿಸುವಾಗ ಪಾಲಿಕೆ ಆಯುಕ್ತರು ಏಕೆ ಸುಮ್ಮನಿದ್ದರು? ಇಲ್ಲಿನ ಉಸ್ತುವಾರಿ ಸಚಿವರು ಕಲಬುರಗಿಗೆ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನ ಕೊಡಿಸಿದ್ದಾರೆಯೇ? ಎಂದರು.

ಗುತ್ತಿಗೆದಾರರು ಅಕ್ರಮವಾಗಿ ಮರಳುಗಾರಿಕೆ ನಡೆಸಿ ನದಿಯನ್ನು ಲೂಟಿ ಮಾಡುತ್ತಿದ್ದಾರೆ. ತಾಲೂಕು ದಂಡಾಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಾಮಗಾರಿ ನಡೆಯುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.