ಪಥ ಸಂಚಲನ: ನ. 13ರಂದು ಸರ್ಕಾರದ ನಿಲುವು ತಿಳಿಸಲು ಹೈಕೋರ್ಟ್ ನಿರ್ದೇಶನ

0
9

ಕಲಬುರಗಿ: ಪಥ ಸಂಚಲನ ನಡೆಸಲು ಅನುಮತಿ ಕೋರಿರುವ ಎಲ್ಲ ಸಂಘಟನೆಗಳಿಗೂ, ಬೇರೆ ಬೇರೆ ದಿನಾಂಕಗಳನ್ನು ನಿಗದಿಪಡಿಸಿ ಅನುಮತಿ ನೀಡಲಾಗುವುದು ಎಂದು ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರು ಭರವಸೆ ನೀಡಿರುವ ಹಿನ್ನಲೆಯಲ್ಲಿ ನ. 13ರಂದು ಮಧ್ಯಾಹ್ನ 2.30ಕ್ಕೆ ರಾಜ್ಯ ಸರ್ಕಾರ ತನ್ನ ನಿಲುವು ತಿಳಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ನಡೆಸಲು ಉದ್ದೇಶಿಸಿರುವ ಪಥ ಸಂಚಲನಕ್ಕೆ ಅನುಮತಿ ಕೋರಿ ಸಲ್ಲಿಸಿರುವ ಮನವಿ ಪರಿಗಣಿಸಲು ಜಿಲ್ಲಾಡಳಿತಕ್ಕೆ ನಿರ್ದೇಶಿಸುವಂತೆ ಕೋರಿ, ಸಂಘದ ಕಲಬುರಗಿ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಾಲ್ ಅವರು, ಶುಕ್ರವಾರ ವಿಚಾರಣೆ ನಡೆಸಿದರು.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, ನ್ಯಾಯಾಲಯದ ಸಲಹೆಯಂತೆ ನ. 5ರಂದು ಬೆಂಗಳೂರಿನ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಭಾಗಿಯಾಗಿದ್ದು, ನಮ್ಮ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದರ ಕುರಿತು ಸರ್ಕಾರ ತನ್ನ ನಿರ್ಧಾರ ತಿಳಿಸಬೇಕಿದೆ ಎಂದರು.

ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರು, ಒಂದು ವಾರದೊಳಗೆ ಮನವಿ ಸಲ್ಲಿಸಿರುವ ಎಲ್ಲ ಸಂಘಟನೆಗಳಿಗೂ ಅನುಮತಿ ನೀಡಲಾಗುವುದು. ಯಾವ ಸಂಘಟನೆಗೆ ಯಾವ ದಿನ ಅವಕಾಶ ಎಂಬುದನ್ನು ಲಿಖಿತವಾಗಿ ತಿಳಿಸಲಾಗುವುದು. ಅದಕ್ಕಾಗಿ ಒಂದು ವಾರ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅರುಣ ಶ್ಯಾಮ್, ನ. 13 ಅಥವಾ 16ರಂದು ಪಥ ಸಂಚಲನ ನಡೆಸಲು ಅನುಮತಿ ನೀಡಿದರೆ ಅನುಕೂಲವಾಗುತ್ತದೆ. ಸಭೆ ನಡೆಸಲು ಕಲ್ಯಾಣ ಮಂಟಪವನ್ನು ಕಾಯ್ದಿರಿಸಲಾಗಿದ್ದು, ನಾವು ಕೇಳಿರುವ ಎರಡು ದಿನಗಳಂದು ಮಾತ್ರ ಮಂಟಪ ಬಳಕೆಗೆ ಲಭ್ಯವಿದೆ ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ನ. 5ರಂದು ಎಲ್ಲ ಸಂಘಟನೆಗಳ ಜತೆ ನಡೆಸಿರುವ ಶಾಂತಿ ಸಭೆಯು ಫಲಪ್ರದವಾಗಿದ್ದು, ಅರ್ಜಿದಾರ ಅಶೋಕ ಪಾಟೀಲ ಅವರು, ನ. 13 ಅಥವಾ 16ರಂದು ಪಥ ಸಂಚಲನಕ್ಕೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ. ಅನುಮತಿ ಕೋರಿರುವ ಎಲ್ಲ ಸಂಘಟನೆಗಳಿಗೂ, ಬೇರೆ ಬೇರೆ ದಿನಾಂಕಗಳನ್ನು ನಿಗದಿಪಡಿಸಿ ಅನುಮತಿ ನೀಡಲಾಗುವುದು ಎಂದು ಎಜಿ ಭರವಸೆ ನೀಡಿದ್ದಾರೆ. ಆದ್ದರಿಂದ ನ. 13ರಂದು ಮಧ್ಯಾಹ್ನ 2.30ಕ್ಕೆ ಅರ್ಜಿ ವಿಚಾರಣೆ ನಡೆಸಲಾಗುವುದು. ಅದೇ ದಿನ ಸರ್ಕಾರ ಅರ್ಜಿದಾರರಿಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ತನ್ನ ನಿಲುವು ತಿಳಿಸಬೇಕು ಎಂದು ಸೂಚಿಸಿ, ಅರ್ಜಿ ವಿಚಾರಣೆ ಮುಂದೂಡಿತು.

Previous articleಖ್ಯಾತ ಸಂಶೋಧಕ, ಸಾಹಿತಿ ವಸಂತ ಮಾಧವ ಇನ್ನಿಲ್ಲ
Next articleಕಲಿಕಾ ಮಟ್ಟ ತೃಪ್ತಿಕರವಾಗಿಲ್ಲ ಎಂದ ಶಿಕ್ಷಕ: ನೊಂದ ಬಾಲಕ ಆತ್ಮಹತ್ಯೆ

LEAVE A REPLY

Please enter your comment!
Please enter your name here