ಕಲಬುರಗಿ: ಕಲಬುರಗಿ ಜಿಲ್ಲೆಯ ಮರಗುತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಸಾಪೂರ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಬೆಳಿಗ್ಗೆ ಅಲ್ಪ ತೀವ್ರತೆಯ ಭೂಕಂಪ ದಾಖಲಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 2.7 ಎಂದು ಕರ್ನಾಟಕ ಸ್ಟೇಟ್ ನ್ಯಾಚುರಲ್ ಡಿಸಾಸ್ಟರ್ ಮಾನಿಟರಿಂಗ್ ಸೆಂಟರ್ (KSNDMC) ತಿಳಿಸಿದೆ.
ಕಂಪನದ ಅನುಭವವಾಗುತ್ತಿದ್ದಂತೆ ಗ್ರಾಮಸ್ಥರು ಮನೆಗಳಿಂದ ಹೊರಬಂದು ಓಡಿಹೋಗಿ ಸುರಕ್ಷಿತ ಸ್ಥಳಗಳಲ್ಲಿ ತಂಗಿದರು. ಈ ಘಟನೆಯಿಂದ ಸ್ಥಳೀಯರಲ್ಲಿ ಭಯ ಮತ್ತು ಆತಂಕದ ವಾತಾವರಣ ನಿರ್ಮಾಣವಾಯಿತು.
ತಕ್ಷಣ ಕಮಲಾಪುರ ತಾಲ್ಲೂಕು ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು ಹಾಗೂ ಸಾರ್ವಜನಿಕರೊಂದಿಗೆ ಮಾತನಾಡಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸೂಚನೆ ನೀಡಿದರು.
KSNDMC ವರದಿ ಪ್ರಕಾರ, ಈ ಭೂಕಂಪದ ಕೇಂದ್ರಬಿಂದು ಭೂಕಂಪ ವಲಯ–II ರಲ್ಲಿದ್ದು, ಕಂಪನದ ತೀವ್ರತೆ ಕಡಿಮೆಯಾಗಿರುವುದರಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ. ಈ ರೀತಿಯ ಅಲ್ಪ ತೀವ್ರತೆಯ ಭೂಕಂಪಗಳು ಸಾಮಾನ್ಯವಾಗಿದ್ದು, 30–40 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಂಪನದ ಅನುಭವವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



























