ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿನ 11 ತಹಸೀಲ್ದಾರರು ಹಾಗೂ ಇಬ್ಬರು ಸಹಾಯಕ ಆಯುಕ್ತರ ಮೇಲೆ ಜಿಲ್ಲಾ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ದಾಖಲಿಸಿ ಕೊಂಡಿದೆ. ಕಲಬುರಗಿ ಜಿಲ್ಲೆಯಲ್ಲಿನ ಸೈನಿಕರ/ಮಾಜಿ ಸೈನಿಕತ/ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರದಿಂದ ದೊರೆಯಬೇಕಾದ ಸವಲತ್ತುಗಳಿಗೆ ಸಂಬಂಧಿಸಿದಂತೆ ವಿಳಂಬ ನೀತಿ ಹಾಗೂ ನಿರ್ಲಕ್ಷ್ಯದ ದೂರುಗಳು ಕೇಳಿಬಂದಿರುವ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿದೆ.
ಸ್ವಾತಂತ್ರ್ಯ ಯೋಧರು ಮತ್ತು ಅವರ ಅವಲಂಬಿತರು ಹಾಗೂ ಹುತಾತ್ಮ ಯೋಧರು ಮತ್ತು ಅವರ ಅವಲಂಬಿತರಿಗೆ ಸಂವಿಧಾನಾತ್ಮಕವಾಗಿ ನೀಡಬೇಕಾದ ಪರಿಹಾರಗಳನ್ನು ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಿಳಂಬ ಧೋರಣೆ ತೋರಿದ ಆರೋಪವು ಕೇಳಿ ಬಂದಿರುತ್ತದೆ. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಕಾಲದಲ್ಲಿ ಕಲ್ಪಿಸಲು ಸರ್ಕಾರದ ವಿವಿಧ ಇಲಾಖೆಗಳಿಂದ ಪೂರಕ ಸ್ಪಂದನೆ ದೊರೆಯದೆ, ವಿನಾಕಾರಣ ಲೋಕಾಯುಕ್ತ ಹಾಗೂ ಲೋಕಾಯುಕ್ತ ಕಾಯ್ದೆಯಡಿ ದುರಾಡಳಿತ ವ್ಯಾಪ್ತಿಗೆ ಒಳಪಡುವುದರಿಂದ ಲೋಕಾಯುಕ್ತ ಸಂಸ್ಥೆಯಿಂದ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಳ್ಳಲಾಗಿದೆ.
ಸರ್ಕಾರದ ಆದೇಶಗಳು, ಸುತ್ತೋಲೆಗಳು ಹಾಗೂ ಕಾನೂನಿನ್ವಯ ನಿವೃತ್ತರಾದ ಯೋಧರಿಗೆ ಹಾಗೂ ಹುತಾತ್ಮ ಯೋಧರ ಅವಲಂಬಿತರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಅವರ ಅವಲಂಬಿತರಿಗೆ ನಿಯಮಾನುಸಾರ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ಹಾಗೂ ನಿವೇಶನಗಳನ್ನು ನೀಡುವಂತೆ ಗೌರವಾನ್ವಿತ ಉಚ್ಛ ನ್ಯಾಯಾಲಯ ಆದೇಶಿಸಿದ್ದರು ಸಹ ಸರ್ಕಾರಿ ನೌಕರರು ತಮ್ಮ ಕರ್ತವ್ಯ ಮರೆತು ಯಾವುದೇ ಕ್ರಮ ಕೈಗೊಳ್ಳದೆ ತೊಂದರೆ ನೀಡುತ್ತಿರುವುದು ವಿಷಾಧಕರ.
ದೇಶವನ್ನು ರಕ್ಷಿಸಲು ಪ್ರಾಣ ನೀಡಿದ ಹಾಗೂ ತಮ್ಮ ಅಂಗಾಂಗಗಳನ್ನು ಕಳೆದುಕೊಂಡ ಯೋಧರಿಗೆ ಹಾಗೂ ಸ್ವಾತಂತ್ರ್ಯ ತಂದುಕೊಟ್ಟ ಹೋರಾಟಗಾರರಿಗೆ ಮತ್ತು ಅವರ ಕುಟುಂಬದವರಿಗೆ ಅವಮಾನ ಮಾಡಿ ಅಗೌರವ ತೋರಿದಂತಾಗುವ ಕಾರಣಕ್ಕಾಗಿ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.
ಕಲಬುರಗಿ ಲೋಕಾಯುಕ್ತದಲ್ಲಿ ದೂರು: ಕಲಬುರಗಿ ಲೋಕಾಯುಕ್ತದಲ್ಲಿ Compt/Uplok/Glb/4812/2025/DRE-1 ದೂರು ದಾಖಲಿಸಿಕೊಳ್ಳಲಾಗಿದೆ. ಅಫ್ಜಲಪುರ ತಹಸೀಲ್ದಾರ ಸಂಜೀವ್ ಕುಮಾರ್ ದಾಸರ್, ಆಳಂದದ ತಹಸೀಲ್ದಾರ ಅಣ್ಣಾರಾವ್ ಪಾಟೀಲ್, ಚಿಂಚೋಳಿ ಸುಬ್ಬಣ್ಣ ಜಮಖಂಡಿ, ಚಿತ್ತಾಪುರ ನಾಗಯ್ಯ, ಜೇವರ್ಗಿಯ ಮಲ್ಲಣ್ಣ, ಕಲಬುರಗಿ ತಾಲ್ಲೂಕಿನ ಆನಂದ ಶೀಲ್, ಕಾಳಗಿಯ ಪೃಥ್ವಿರಾಜ್, ಕಮಲಾಪುರ ಮೊಹ್ಮದ್ ಮೋಸಿನ್, ಸೇಡಂ ಶ್ರೀಯಾಂಕ್ ಧನಶ್ರೀ, ಶಹಾಬಾದ್ ಜಗದೀಶ್ ಮತ್ತು ಯಡ್ರಾಮಿ ತಾಲ್ಲೂಕಿನ ತಹಸೀಲ್ದಾರ ಯಲ್ಲಪ್ಪ ಸುಬೇದಾರ್ ಮತ್ತು ಕಲಬುರಗಿ ಉಪವಿಭಾಗದ ಸಹಾಯಕ ಆಯುಕ್ತರಾದ ಸಾಹಿತ್ಯ ಹಾಗೂ ಸೇಡಂ ಸಹಾಯಕ ಆಯುಕ್ತರಾದ ಪ್ರಭುರೆಡ್ಡಿ ಅವರ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ.