ಕಲಬುರಗಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿಯೇ ವ್ಯಕ್ತಿಯೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಗರದ ಶಿವಶಕ್ತಿ ನಗರದಲ್ಲಿ ಸಂಭವಿಸಿದೆ. ಮೃತನನ್ನು ಖಂಡುರಾಜ್ ದಾಲವಾಜೀ (45) ಎಂದು ಗುರುತಿಸಲಾಗಿದೆ.
ಖಂಡುರಾಜ್ ಕಳೆದ ಹಲವು ವರ್ಷಗಳಿಂದ ದುಬೈನಲ್ಲಿ ಶಿಪ್‌ನಲ್ಲಿ ಕೆಲಸ ಮಾಡುತ್ತಿದ್ದನು. ಇತ್ತೀಚೆಗೆ ಕೆಲವು ದಿನಗಳ ಹಿಂದಷ್ಟೇ ವಿದೇಶದಿಂದ ವಾಪಸ್ ಮನೆಗೆ ಆಗಮಿಸಿದ್ದನು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಭಾನುವಾರ ರಾತ್ರಿ ಖಂಡುರಾಜ್ ಮತ್ತು ಅವನ ಪತ್ನಿಯ ನಡುವೆ ತೀವ್ರವಾದ ಗೃಹ ಕಲಹ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ: ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ FIR
ಈ ಜಗಳದ ಹಿನ್ನೆಲೆಯಲ್ಲಿ ಮನನೊಂದ ಪತ್ನಿ, ಖಂಡುರಾಜ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಬೆಳವಣಿಗೆಯಿಂದ ಮನಸ್ಸಿಗೆ ತೀವ್ರವಾದ ನೋವು ಅನುಭವಿಸಿದ್ದ ಖಂಡುರಾಜ್, ಮನೆಗೆ ಯಾರು ಇಲ್ಲದ ಸಮಯದಲ್ಲಿ ತನ್ನ ಬಳಿಯಿದ್ದ ಗನ್‌ನಿಂದ ಸ್ವತಃ ತನ್ನ ಮೇಲೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಮನೆಯೊಳಗಿಂದ ಗುಂಡಿನ ಶಬ್ದ ಕೇಳಿದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ತಕ್ಷಣ ಚೌಕ್ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.
ಇದನ್ನೂ ಓದಿ: FIDE World Rapid Championships: ಇತಿಹಾಸ ನಿರ್ಮಿಸಿದ ಅರ್ಜುನ್ ಎರಿಗೈಸಿ
ಈ ಸಂಬಂಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಲು ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಮೃತನ ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದುರ್ಘಟನೆ ನಗರದಲ್ಲಿ ವಿಷಾದದ ವಾತಾವರಣ ನಿರ್ಮಿಸಿದ್ದು, ಗೃಹ ಕಲಹಗಳು ಮಾನಸಿಕ ಒತ್ತಡಕ್ಕೆ ಕಾರಣವಾಗದಂತೆ ಸಮಾಜದಲ್ಲಿ ಜಾಗೃತಿ ಅಗತ್ಯ ಎಂಬ ಮಾತುಗಳು ಕೇಳಿಬರುತ್ತಿವೆ.
ಸೂಚನೆ: ಮಾನಸಿಕ ಒತ್ತಡ ಅಥವಾ ಸಂಕಷ್ಟದಲ್ಲಿರುವವರು ಸಹಾಯ ಪಡೆಯುವುದು ಅತ್ಯಂತ ಅಗತ್ಯ. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ. ಅಗತ್ಯವಿದ್ದಲ್ಲಿ ಸ್ಥಳೀಯ ಸಹಾಯವಾಣಿ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳ ನೆರವು ಪಡೆಯಲು ಮನವಿ.























